More

    ಮಳೆಯ ಕಿರಿಕಿರಿ, ಹಾಳಾಗುತ್ತಿದೆ ತರಕಾರಿ

    ಬೆಳಗಾವಿ: ಕೋವಿಡ್-19 ಕಾಟದಿಂದ ತತ್ತರಿಸಿರುವ ಜಿಲ್ಲೆಯ ಜನತೆಗೆ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ನೆಮ್ಮದಿ ಕೆಡಿಸಿದೆ. ಶುಕ್ರವಾರ ರಾತ್ರಿ 7 ಗಂಟೆಯಿಂದ ಮಳೆ ಸುರಿಯಲಾರಂಭಿಸಿದ್ದು, ಶನಿವಾರ ರಾತ್ರಿಯವರೆಗೂ ಮುಂದುವರಿದಿತ್ತು.

    ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿರಂತರ ಮಳೆಗೆ ಮಣ್ಣಿನ ಗೋಡೆಗಳು ನೆನೆದು ಕುಸಿಯತೊಡಗಿದೆ. ಮೂಡಲಗಿ, ರಾಮದುರ್ಗ ಹಾಗೂ ಅಥಣಿ ತಾಲೂಕಿನ ಗ್ರಾಮಗಳಲ್ಲಿರುವ ನಾಲ್ಕು ಹಳೆಯ ಮನೆಗಳ ಮಣ್ಣಿನ ಗೋಡೆಗಳು ಮಳೆ ನೀರಿಗೆ ನೆನೆದು ಕುಸಿದಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

    ಮುಂಗಾರು ಹಂಗಾಮಿನ ಬೆಳೆಗಳ ಒಕ್ಕಣೆ ಮತ್ತು ಕೃಷಿಭೂಮಿ ಹದಗೊಳಿಸುವ ಸಂದರ್ಭದಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಗ್ರಾಹಕರ ಅಭಾವದಿಂದ ವ್ಯಾಪಾರಿಗಳ ಬಳಿಯಿರುವ ತರಕಾರಿಗಳು ಮಾರಾಟವಾಗದೆ ಹಾಳಾಗುತ್ತಲಿದೆ.

    ಗ್ರಾಮೀಣ ಭಾಗದಲ್ಲೂ ಮಳೆ: ಬೆಳಗಾವಿ ನಗರವಷ್ಟೇ ಅಲ್ಲದೆ, ಜಿಲ್ಲೆಯ ಸವದತ್ತಿ, ಮೂಡಲಗಿ, ಗೋಕಾಕ, ಬೈಲಹೊಂಗಲ, ರಾಮದುರ್ಗ, ಖಾನಾಪುರ, ಹುಕ್ಕೇರಿ, ಚನ್ನಮ್ಮ ಕಿತ್ತೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿ ಜನ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ತೆರಳಬೇಕಿದ್ದ ಕೆಲ ಸಾರಿಗೆ ಬಸ್ಸುಗಳನ್ನೂ ಸ್ಥಗಿತಗೊಳಿಸಲಾಗಿದೆ.

    ಸಂಚಾರ ದಟ್ಟಣೆ: ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತ, ಶಿವಬಸವ ನಗರ, ಗಾಂಧಿ ನಗರ, ಕಾಲೇಜ್ ರಸ್ತೆ,
    ಮಹಾಂತೇಶ ನಗರ, ಸಿವಿಲ್ ಆಸ್ಪತ್ರೆ ಸೇರಿದಂತೆ ವಿವಿಧ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಜತೆಗೆ ಧಾರಾಕಾರ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಎದುರಿಸಬೇಕಾಯಿತು.

    ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟಿಗೆ ತೊಡಕು

    ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರವ ಪರಿಣಾಮ ಶನಿವಾರ ಬೆಳಗ್ಗೆಯಿಂದ ಬೆಳಗಾವಿ ನಗರದಲ್ಲಿ ಗ್ರಾಹಕರು ಇಲ್ಲದೆ ವ್ಯಾಪಾರ ವಹಿವಾಟಿಗೆ ತೊಡಕಾಯಿತು. ಅಲ್ಲದೆ, 4ನೇ ಶನಿವಾರ ಸರ್ಕಾರಿ ರಜೆ ಇರುವುದರಿಂದ ನೌಕರರು ಮನೆಯಲ್ಲೇ ಇದ್ದರು. ರಸ್ತೆ ಬದಿ, ತಳ್ಳು ಗಾಡಿ ವ್ಯಾಪಾರಿಗಳು ಧಾರಾಕಾರ ಮಳೆಯಿಂದ ವ್ಯಾಪಾರ ಇಲ್ಲದೆ ಕೈಕಟ್ಟಿ ಕುಳಿತುಕೊಂಡಿದ್ದರು. ಜಿಲ್ಲೆಯ ವಿವಿಧ ಭಾಗಗಲ್ಲಿ ಶನಿವಾರ ನಡೆಯುತ್ತಿದ್ದ ವಾರದ ಸಂತೆ, ಜಾನುವಾರು ಪೇಟೆಗಳಲ್ಲೂ ಸಹ ಜನರು ಇಲ್ಲದೆ ಬಿಕೋ ಎನ್ನುತ್ತಿದ್ದವು.

    ಪ್ರತಿದಿನ 1,500 ರೂ. ವ್ಯಾಪಾರ ಮಾಡಿಕೊಂಡು ಮನೆಗೆ ಹೋಗುತ್ತಿದ್ದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಬಿಡದೇ ಮಳೆ ಸುರಿಯುತ್ತಿರುವುದರಿಂದ ದಿನಕ್ಕೆ 150 ರೂ. ವ್ಯಾಪಾರವೂ ಆಗುತ್ತಿಲ್ಲ. ಮಳೆ ಕಾರಣದಿಂದ ಗ್ರಾಹಕರೂ ಬರುತ್ತಿಲ್ಲ. ಹೊಲದಿಂದ ತೆಗೆದುಕೊಂಡು ಬಂದಿದ್ದ ತರಕಾರಿ ಮಳೆಯಿಂದಾಗಿ ಹಾಳಾಗುತ್ತಿದೆ.
    | ಕಮಲವ್ವ ಎಂ. ಮಾದರ, ಬೆಳಗಾವಿ ನಗರದ ತರಕಾರಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts