More

    ಮತ್ತೆ ಬಿರುಸು ಪಡೆದ ಮುಂಗಾರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಮತ್ತೆ ಸ್ವಲ್ಪ ಬಿರುಸು ಪಡೆದಿದೆ. ಗುರುವಾರ ರಾತ್ರಿ ಮಳೆ ಆರಂಭವಾಗಿದ್ದು, ಶುಕ್ರವಾರ ಮಧ್ಯಾಹ್ನ ವರೆಗೂ ನಿರಂತರವಾಗಿ ಸುರಿದು ಆ ಬಳಿಕ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಹಗಲು ಬಿಟ್ಟುಬಿಟ್ಟು ಮಳೆಯಾಗಿದೆ.

    15-20 ದಿನಗಳಿಂದ ಮಳೆ ಇಲ್ಲದೆ, ಬಿಸಿಲಿನ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ಮಳೆ ಮತ್ತೆ ತಂಪಿನ ಅನುಭವ ನೀಡಿದೆ. ಮಳೆ ಆರಂಭವಾಗಿರುವುದರಿಂದ ಕೃಷಿಕರ ಮುಖದಲ್ಲೂ ಮಂದಹಾಸ ಮೂಡಿಸಿದೆ. ಘಟ್ಟದ ತಪ್ಪಲಿನ ಭಾಗಗಳಲ್ಲಿ ನಿರಂತರ ಮಳೆಯಿಂದ ತೋಡು, ಹಳ್ಳಗಳು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಬೆಳಗ್ಗೆ ಸುರಿದ ಮಳೆಗೆ ಮಂಗಳೂರು ನಗರದಲ್ಲೂ ಅಲ್ಲಲ್ಲಿ ರಸ್ತೆ ನೀರಿನಿಂದ ಆವೃತವಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

    ಮಂಗಳೂರಿನಲ್ಲಿ ಅತ್ಯಧಿಕ ಮಳೆ: ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 36.8 ಮಿ.ಮೀ ಮಳೆ ಸುರಿದಿದೆ. ಉಳಿದಂತೆ ಬೆಳ್ತಂಗಡಿ 10.1, ಬಂಟ್ವಾಳ 16.5, ಪುತ್ತೂರು 3, ಸುಳ್ಯ 2.2, ಮೂಡುಬಿದಿರೆ 5.4, ಕಡಬ 2.9 ಮಿ.ಮೀ. ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 11 ಮಿ.ಮೀ. ಮಳೆ ಸುರಿದಿದೆ. ಮಂಗಳೂರಿನಲ್ಲಿ ತಾಪಮಾನದಲ್ಲಿಯೂ ಇಳಿಕೆಯಾಗಿದ್ದು, ದಿನದ ಗರಿಷ್ಠ ತಾಪಮಾನ 26.1ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಾಳೆ-ನಾಡಿದ್ದು ರೆಡ್ ಅಲರ್ಟ್: ಸದ್ಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಆಕಾಶ ಮುಚ್ಚುವ ರೀತಿಯಲ್ಲಿ ಮೋಡಗಳು ಇರುವುದರಿಂದ ಮಳೆ ಎಲ್ಲ ಕಡೆಗಳಲ್ಲೂ ಮಳೆ ಒಂದೇ ರೀತಿಯಲ್ಲಿ ಸುರಿಯುತ್ತಿದೆ. ಬೆಳಗ್ಗಿನ ಅವಧಿಯಲ್ಲಿ ಗುಡುಗಿನ ಮಳೆಯೊಂದಿಗೆ ಗುಡುಗಿನ ಮೊರೆತವೂ ಕೇಳಿ ಬಂದಿದೆ. ಮಳೆ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಭಾನುವಾರ ಮತ್ತು ಸೋಮವಾರಕ್ಕೆ ಸದ್ಯ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಮೀನುಗಾರರಿಗೆ ಎಚ್ಚರಿಕೆ: ಸಮುದ್ರದಿಂದ ಗಂಟೆಗೆ 40ರಿಂದ 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ. ಸಮುದ್ರ ತಟದ ನಿವಾಸಿಗಳೂ ಮಳೆ-ಗಾಳಿಯ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts