More

    ಭಾರಿ ಮಳೆಯಿಂದ ಬೆಳೆ ಜಲಾವೃತ: 35 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ, ಕೋಲಾರ ತಾಲೂಕಿನಲ್ಲಿ 10 ಮಿಮೀ ಮಳೆ

    ಕೋಲಾರ :  ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿ ಹೊಲ-ತೋಟಗಳು ಜಲಾವೃತಗೊಂಡಿವೆ. 35 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ.
    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕೃಷಿ, ತೋಟಗಾರಿಕೆ ಬೆಳೆಗಳ ಜಮೀನಿನಲ್ಲಿ ನೀರು ನಿಂತು ರೈತರು ನಷ್ಟ ಅನುಭವಿಸುವಂತಾಗಿದೆ.

    ಆಲೇರಿ ಗ್ರಾಮದಲ್ಲಿ ರಾತ್ರಿ 10ಕ್ಕೆ ಆರಂಭವಾದ ಮಳೆ ಬುಧವಾರ ಬೆಳಗಿನ ಜಾವ 3 ಗಂಟೆವರೆಗೂ ಸುರಿಯಿತು. ಮಳೆ ನೀರು ಚರಂಡಿಯಿಂದ ಉಕ್ಕಿ ಹರಿದು ಜಮೀನು, 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಸಿ.ಮುನಿಯಪ್ಪ ಅವರ ಮನೆಯಲ್ಲಿ 15 ಕ್ವಿಂಟಾಲ್‌ಗೂ ಅಧಿಕ ರಾಗಿ ನೀರು ಪಾಲಾಗಿದೆ, ಎಡಿ ಕಾಲನಿಯಲ್ಲಿ 7 ಮನೆಗಳಿಗೆ ನೀರು ನುಗ್ಗಿದೆ. ತಮ್ಮರೆಡ್ಡಿ ಎಂಬುವವರ ಮನೆಯೊಳಗೆ ಎರಡೂವರೆ ಅಡಿಗಳಷ್ಟು ನೀರು ನಿಂತಿದ್ದರಿಂದ ನೀರನ್ನು ಮೋಟರ್ ಇಟ್ಟು ಹೊರತೆಗೆಯುವಂತಾಗಿತ್ತು. ದೇವರಾಜ್ ಕುಟುಂಬದವರು ರಾತ್ರಿಯಿಡೀ ನಿದ್ದೆಗೆಟ್ಟು ನೀರು ಹೊರಚೆಲ್ಲಿದರು.

    ಆಲೇರಿಯ ತಂಗುದಾಣದ ಬಳಿ ಮರ ಬಿದ್ದು, ಕೋದಂಡರಾಮಸ್ವಾಮಿ ದೇವಾಲಯದವರೆಗೆ ಉದ್ದಕ್ಕೂ 6 ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಅಡಚಣೆಯಾಗಿತ್ತು. ಈ ಭಾಗದ ಕೃಷಿ ಬೆಳೆಗಳಿಗೂ ಹಾನಿಯಾಗಿದೆ.
    ಹೊಸಮಟ್ನಹಳ್ಳಿ ಕೃಷ್ಣಪ್ಪ, ಹುಲ್ಲಪ್ಪ, ಕನಕರಾಜ್ ಅವರ ಟೊಮ್ಯಾಟೊ ತೋಟ, ಕೆ.ಶ್ರೀನಿವಾಸಗೌಡರ ಕ್ಯಾಪ್ಸಿಕಂ, ಕೋಸು, ಸುನೀತಮ್ಮ ಅವರ ಹೊಲ ನೀರಿನಲ್ಲಿ ಮುಳುಗಿದೆ. ತೊಟ್ಲಿಯಲ್ಲಿ ಹೊಸಕೋಟೆ ಮೂಲದ ರೈತರೊಬ್ಬರ ಸೀಬೆ ತೋಟಕ್ಕೂ ನೀರು ನುಗ್ಗಿದೆ.ತೊಟ್ಲಿ ಭಾಗದಲ್ಲಿ ಮುನಿವೆಂಕಟಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ನೀರು ನುಗ್ಗಿದೆ. ಚಿಟ್ನಹಳ್ಳಿಯಲ್ಲಿ ಶ್ರೀನಿವಾಸ್ ರಾಗಿ ಬೆಳೆ, ಗುರಪ್ಪ 1 ಎಕರೆಯಲ್ಲಿ ಬೆಳೆದಿದ್ದ ಹುರುಳಿಕಾಯಿ, ಟೊಮ್ಯಾಟೊ ಸೇರಿ ಇನ್ನಿತರ ಕೃಷಿ, ತೋಟಗಾರಿಗೆ, ಹೂವಿನ ಬೆಳೆಗಳು ಹಾನಿಯಾಗಿದೆ.

    ಕೆರೆಗಳಿಗೆ ನೀರು: ಸಣ್ಣ-ಪುಟ್ಟ ಕೆರೆಗಳಲ್ಲಿ ಅರ್ಧಕ್ಕೂ ಹೆಚ್ಚು ನೀರು ಸಂಗ್ರಹವಾಗಿದೆ. ಇನ್ನೊಂದೆಡೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಕಾಲುವೆಗಳಲ್ಲಿ ಹೆಚ್ಚಿನ ಪ್ರಮಾಣ ನೀರು ಕೆರೆಗಳಿಗೆ ಹರಿದಿದೆ.

    ಜಿಲ್ಲೆಯ ಮಳೆ ವಿವರ :  ಕೋಲಾರ ತಾಲೂಕಿನಲ್ಲಿ ಸರಾಸರಿ 10 ಮಿಮೀ ಮಳೆಯಾಗಿದೆ. ವಕ್ಕಲೇರಿಯಲ್ಲಿ 4 ಮಿಮೀ, ಸುಗಟೂರು 3, ಹೋಳೂರು 3.4 ಮಿಮೀ, ವೇಮಗಲ್ 3.1 , ಕಸಬಾ 2.5 ಮಿಮೀ ಮಳೆಯಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ 2.8 ಮಿಮೀ, ಮಾಲೂರು 5.8 , ಮುಳಬಾಗಿಲು 3.8 , ಶ್ರೀನಿವಾಸಪುರ 3 ಮಿಮೀ, ಕೆಜಿಎಫ್ 2.6 ಮಿಮೀ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 6 ಮಿಮೀ ಮಳೆ ದಾಖಲಾಗಿದೆ. ಒಟ್ಟಾರೆ ಆಗಸ್ಟ್ ತಿಂಗಳಲ್ಲಿ ಈ ಅವಧಿಯಲ್ಲಿ 71.8 ಮಿಮೀ ವಾಡಿಕೆ ಮಳೆಗೆ 99.6 ಮಿಮೀ ಮಳೆ ದಾಖಲಾಗಿದೆ.

    ಸುಗಟೂರು ಹೋಬಳಿ ಸೇರಿ ತಾಲೂಕಿನ ವಿವಿಧೆಡೆ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ನಡೆಸಿ ನಷ್ಟ ಪರಿಹಾರ ದೊರಕಿಸಿಕೊಡಬೇಕು.
    ಕೆ.ಶ್ರೀನಿವಾಸಗೌಡ, ಹೊಸಮಟ್ನಹಳ್ಳಿ

    ಭಾರಿ ಮಳೆಯಿಂದ ಬೆಳೆ ಮುಳುಗಡೆಯಾಗಿರುವ ಹೊಲಗಳಲ್ಲಿ ಕಾಲುವೆ ತೆಗೆದು ನೀರು ಹರಿದು ಹೋಗಲು ಅವಕಾಶ ಮಾಡಿಕೊಟ್ಟಲ್ಲಿ ಸಮಸ್ಯೆಯಾಗದು. ಇನ್ನೂ ಎರಡು ದಿನ ಇದೇ ರೀತಿ ಮಳೆಯಾದರೆ ನೀರಿನಿಂದ ಮುಳುಗಡೆಯಾಗಿರುವ ರಾಗಿ ಪೈರು ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಬಹುದು.
    ವಿ.ಡಿ.ರೂಪದೇವಿ, ಜಂಟಿ ಕೃಷಿ ನಿರ್ದೇಶಕಿ, ಕೋಲಾರ

    ಕೋಲಾರ ತಾಲೂಕಿನ ತೊಟ್ಲಿ, ಎಸ್.ಅಗ್ರಹಾರ, ಸುಗಟೂರು, ಹೊಸಮಟ್ನಹಳ್ಳಿ, ಚಿಟ್ನಹಳ್ಳಿ, ಅಂಕತಟ್ಟಿ ಭಾಗದಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಸೇರಿ 35 ಹೆಕ್ಟೇರ್‌ನಲ್ಲಿ ಟೊಮ್ಯಾಟೊ, ತರಕಾರಿ ಬೆಳೆ ನಷ್ಟವಾಗಿದೆ.
    ಎಂ.ಗಾಯತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts