More

    ಕೇಂದ್ರ ಸ್ಥಳ ಬಿಟ್ಟ ರೈಲ್ವೆ ನೌಕರರ ಅಮಾನತು

    ಮಂಗಳೂರು: ಲಾಕ್‌ಡೌನ್ ಸಂದರ್ಭ ಕೇಂದ್ರ ಸ್ಥಳ ಬಿಟ್ಟು ಊರಿಗೆ ತೆರಳಿದ ಮಂಗಳೂರಿನ ಮೂವರು ರೈಲ್ವೆ ನೌಕರರನ್ನು ಅಮಾನತುಗೊಳಿಸಿ ವಿಭಾಗೀಯ ರೈಲ್ವೆ ಪ್ರಬಂಧಕರು ಆದೇಶಿಸಿದ್ದಾರೆ.

    ಕೇರಳ ಪಾಲಕ್ಕಾಡ್ ನಿವಾಸಿಗಳಾದ ಟಿ.ರಾಜೇಶ್, ಎ.ಅರುಣಾ ಮತ್ತು ಮಲಪ್ಪುರಂ ನಿವಾಸಿ ಅನೂಪ್ ಕುಮಾರ್ ಅಮಾನತುಗೊಂಡ ನೌಕರರು. ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಇಲಾಖೆಯ ನೌಕರರು ಮೇಲಧಿಕಾರಿಗಳ ಅನುಮತಿ ಇಲ್ಲದೆ ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಳ ಬಿಡದಂತೆ ಇಲಾಖೆ ನಿರ್ದೇಶಿಸಿದೆ. ಇಲಾಖೆ ನಿರ್ದೇಶನ ಉಲ್ಲಂಘಿಸಿ ಗುರುವಾರ ರಾತ್ರಿ ಮಂಗಳೂರು ಜಂಕ್ಷನ್‌ನಿಂದ ಕೊಚುವೆಳಿ (ತಿರುವನಂತಪುರಂ)ಗೆ ತೆರಳಿದ ಖಾಲಿ ರೈಲು ಏರಿದ ಓರ್ವ ರೈಲ್ವೆ ನೌಕರ ರಾತ್ರಿ ಕೋಝಿಕೋಡ್‌ನಲ್ಲಿ ಇಳಿದಿದ್ದರು. ಇನ್ನಿಬ್ಬರು ಶೊರ್ನೂರ್‌ನಲ್ಲಿ ಇಳಿದು ವಾಹನಕ್ಕಾಗಿ ಕಾಯುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ಸಂದರ್ಭ ಇಡೀ ಪ್ರಕರಣ ಬಯಲಾಗಿದೆ. ಈ ಬಗ್ಗೆ ವಿಜಯವಾಣಿ ಶನಿವಾರ ವರದಿ ಮಾಡಿತ್ತು.

    ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಕೇಂದ್ರ ಸ್ಥಾನ ಬಿಟ್ಟು ತೆರಳಿದ ಇತರ ನೌಕರರ ಮಾಹಿತಿಯನ್ನು ಇಲಾಖೆ ಮೇಲಧಿಕಾರಿಗಳು ಪಡೆದಿದ್ದಾರೆ. ಮಂಗಳೂರಿನಲ್ಲಿ ಕರ್ತವ್ಯ ದಲ್ಲಿ ಇರಬೇಕಾದ ಎಲ್ಲ ರೈಲ್ವೆ ನೌಕರರು ಹಾಜರಾಗಿ ಸಹಿ ಹಾಕಲು ದೂರವಾಣಿ ಮೂಲಕ ಅಧಿಕಾರಿಗಳು ಸೂಚಿಸಿದ್ದು, ಹಾಜರಾತಿ ಸಂದರ್ಭ ಕೇಂದ್ರ ಸ್ಥಳದಲ್ಲಿ ಇಲ್ಲದ ಇತರ ನೌಕರರ ಮಾಹಿತಿ ಇಲಾಖೆ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಬಗ್ಗೆ ಕ್ರಮ ಆರಂಭಗೊಂಡಿದೆ. ಇಲಾಖೆ ಕ್ರಮಕ್ಕೆ ಒಳಗಾಗಿರುವ ಮತ್ತು ಒಳಗಾಗುತ್ತಿರುವ ನೌಕರರಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಕಾರ್ಮಿಕ ಸಂಘಟನೆಗಳಿಗೆ ಸೇರಿದ ಮುಖಂಡರು ಇದ್ದಾರೆ. ಸ್ಥಳದಲ್ಲಿ ಇಲ್ಲದ ಇತರ ನೌಕರರ ಮೇಲೆ ಕೂಡ ಇಲಾಖೆ ಕ್ರಮ ಬಹುತೇಕ ಖಚಿತ ರೈಲ್ವೆ ಮೂಲ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts