More

    ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ರೈಲ್ವೆ ಕೋಚಿಂಗ್ ಡಿಪೋ ಸ್ಥಳಾಂತರ

    ಶಿವಮೊಗ್ಗ: ರೈಲ್ವೆ ಕೋಚಿಂಗ್ ಡಿಪೋ ಸ್ಥಾಪನೆಗೆ ತಾಳಗುಪ್ಪ ಸೂಕ್ತ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದರು. ಲೋಕಸಭಾ ಸದಸ್ಯರು ಇದನ್ನು ಹಲವು ಬಾರಿ ಹೇಳಿದ್ದರು. ಆದರೆ ಅಂತಿಮವಾಗಿ ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ಕೋಟೆಗಂಗೂರಲ್ಲಿ ಡಿಪೋ ಸ್ಥಾಪಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಆರೋಪಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ರೈಲ್ವೆ ಕೋಚಿಂಗ್ ಡಿಪೋ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದಿರುವುದು ಹಾಸ್ಯಾಸ್ಪದ. ಅವರು ಲೋಕಸಭಾ ಸದಸ್ಯರ ರಕ್ಷಣೆಗೆ ಯತ್ನಿಸುತ್ತಿದ್ದಾರೆ ಎಂದ ಶ್ರೀನಿವಾಸ್, ರೈಲ್ವೆ ಇಲಾಖೆ ಅಧಿಕಾರಿಗಳ ಪತ್ರವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

    ಶಾಸಕರು ಮಾತನಾಡುತ್ತಿಲ್ಲ: ತಾಳಗುಪ್ಪದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಆಗದಿರುವ ಬಗ್ಗೆ ಶಾಸಕರಾದ ಕುಮಾರ್ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ಮಾತನಾಡುತ್ತಿಲ್ಲ. ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎದುರು ಮಾತನಾಡಲು ಹೆದರಿಕೆ ಎಂದು ಲೇವಡಿ ಮಾಡಿದರು.

    ಸಿಎಂ ಮತ್ತು ಲೋಕಸಭಾ ಸದಸ್ಯ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಶಿಕಾರಿಪುರ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಇದ್ದರೂ ಮೂವರು ಸದಸ್ಯರಿಗೆ ರಾಜೀನಾಮೆ ಕೊಡಿಸಿದ್ದಾರೆ. ಜಿಪಂನಲ್ಲಿ ಹಿಂಬಾಗಿಲ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

    ಮಾತು ಮರೆತರು: ಅಧಿಕಾರ ಇಲ್ಲದ ಸಂದರ್ಭ ನೀಡಿದ್ದ ವಾಗ್ದಾನಗಳನ್ನು ರಾಘವೇಂದ್ರ ಹಾಗೂ ಯಡಿಯೂರಪ್ಪ ಮರೆತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಅಡಕೆ ಬೆಳೆಗಾರರ ಹಿತ ಕಾಯಲು ವಿಫಲರಾಗಿದ್ದಾರೆ. ಮನೆ ನಿರ್ವಿುಸಿಕೊಂಡವರಿಗೆ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾದಲ್ಲಿ ದುಡ್ಡಿಲ್ಲ ಎನ್ನುತ್ತಲೇ ಜಾತಿಗೊಂದು ನಿಗಮ ಮಾಡಲು ಮುಂದಾಗಿದ್ದಾರೆ ಎಂದು ತೀ.ನ.ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದರು. ಶರಾವತಿ ಸಂತ್ರಸ್ತರಿಗೆ ಇನ್ನೂ ಭೂಮಿ ನೀಡಿಲ್ಲ. ಮಂಕಿ ಪಾರ್ಕ್ ಸ್ಥಾಪನೆ ವಿಷಯವನ್ನು ಮರೆತು ಬಿಟ್ಟಿದ್ದಾರೆ ಎಂದು ಟೀಕಿಸಿದರು.

    ಸಾಗರ ನಗರಸಭೆ ಸದಸ್ಯರಾದ ಸೈಯದ್ ಜಾಕೀರ್, ಲಲಿತಮ್ಮ, ಪ್ರಮುಖರಾದ ಎಲ್.ವಿ.ಸುಭಾಷ್, ಮಹಾಬಲೇಶ್ವರ ಶೇಟ್, ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts