More

    ಸಿದ್ಧಗಂಗಾ ಮಠಕ್ಕೆ ತೆರಳಲು ರೈಲ್ವೆ ಸೇತುವೆ ನಿರ್ಮಾಣ ; ಮುಂದಿನ ವಾರದಿಂದಲೇ ಕಾಮಗಾರಿ

    ತುಮಕೂರು: ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗದ ಕ್ಯಾತಸಂದ್ರ ‘ರೈಲ್ವೆ ಲೆವೆಲ್ ಕ್ರಾಸಿಂಗ್’ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಮುಂದಿನ ವಾರದಿಂದಲೇ ಆರಂಭವಾಗಲಿದೆ.

    ರೈಲ್ವೆ ಇಲಾಖೆ ಕೈಗೆತ್ತಿಕೊಂಡಿರುವ ರೈಲ್ವೆ ಅಂಡರ್ ಬ್ರಿಡ್ಜ್ (ಆರ್‌ಯುಬಿ) ಹಾಗೂ ರೈಲ್ವೆ ಓವರ್ ಬ್ರಿಡ್ಜ್ (ಆರ್‌ಒಬಿ) ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಶುಕ್ರವಾರ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳನ್ನು ಭೇಟಿ ಮಾಡಿದ ರೈಲ್ವೆ ಇಲಾಖೆ ಅಧಿಕಾರಿಗಳು ಈ ಸಂಬಂಧ ಯೋಜನೆ ನೀಲಿನಕ್ಷೆ ತೋರಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

    3 ಕೋಟಿ ವೆಚ್ಚದ ಆರ್‌ಯುಬಿ: ರೈಲ್ವೆ ಹಳಿಯಿಂದ ಉಭಯ ಕಡೆಗೆ 30 ಮೀಟರ್‌ನಷ್ಟು ರೈಲ್ವೆ ಅಂಡರ್ ಬ್ರಿಡ್ಜ್ ಹಾಗೂ 100 ಮೀಟರ್‌ನಷ್ಟು ಫೈಓವರ್ ನಿರ್ಮಾಣ ಮಾಡಲಾಗುತ್ತಿದ್ದು ಅತ್ಯಂತ ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದೆ. ಮೊದಲಿಗೆ 3 ಕೋಟಿ ವೆಚ್ಚದಲ್ಲಿ ಆರ್‌ಯುಬಿ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆ ಆರಂಭಿಸಲಿದೆ. ಪಾದಚಾರಿಗಳು, ದ್ವಿಚಕ್ರವಾಹನ, ಲಘು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಆರ್‌ಯುಬಿ ನಿರ್ಮಿಸಲಾಗುತ್ತಿದೆ.

    ಸೋಮವಾರದಿಂದಲೇ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೆಳಸೇತುವೆಯಲ್ಲಿ ಮಳೆ ನೀರು ನಿಲ್ಲದಂತೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಕಾಮಗಾರಿಗೆ ಕೆಲವು ಆರಂಭಿಕ ವಿಘ್ನಗಳಿದ್ದು, ಈ ಹಿನ್ನೆಲೆಯಲ್ಲಿ ಬೆಸ್ಕಾಂ, ಟೆಲಿಕಾಂ, ಕಂದಾಯ ಹಾಗೂ ಪಾಲಿಕೆಯ ಅಧಿಕಾರಿಗಳ ಜತೆ ರೈಲ್ವೆ ಇಲಾಖೆ ಅಧಿಕಾರಿಗಳು ‘ಸಮನ್ವಯ’ ಸಭೆ ನಡೆಸಲಿದ್ದಾರೆ.

    ವಿದ್ಯುತ್ ಕಂಬಗಳು, ಒಎಫ್‌ಸಿ ಕೇಬಲ್‌ಗಳು, ಕುಡಿಯುವ ನೀರು ಪೂರೈಕೆ ಪೈಪ್ ಸ್ಥಳಾಂತರ ಹಾಗೂ ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು ಈ ಅಡಚಣೆಗಳು ಶೀಘ್ರ ಬಗೆಹರಿದರೆ ಇನ್ನೂ 6 ತಿಂಗಳಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ರೈಲ್ವೆ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ. ಸಿದ್ದಲಿಂಗ ಶ್ರೀಗಳ ಭೇಟಿ ಸಂದರ್ಭದಲ್ಲಿ ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ ಮ್ಯಾನೇಜರ್ ಲಕ್ಷ್ಮಣ್ ಸಿಂಗ್, ಹಿರಿಯ ವಿಭಾಗೀಯ ಇಂಜಿನಿಯರ್ ಪರ್ವೇಶ್ ಕುಮಾರ್ ಹಾಗೂ ಇತರ ರೈಲ್ವೆ ಅಧಿಕಾರಿಗಳಿದ್ದರು.

    25 ಕೋಟಿ ರೂಪಾಯಿ ವೆಚ್ಚ : ಕ್ಯಾತಸಂದ್ರ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಲು ಉದ್ದೇಶಿಸಿರುವ ‘ರೈಲ್ವೆ ಫ್ಲೈ ಓವರ್ ಯೋಜನೆಗೆ ಅಂದಾಜು 25 ಕೋಟಿ ರೂ., ತಗುಲಲಿದೆ. ಈ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಪಾಲು ಇರಲಿದ್ದು, ಟೆಂಡರ್ ಕರೆಯಲಾಗಿದೆ. ರೈಲ್ವೆ ಹಳಿಯಿಂದ ಉಭಯ ಕಡೆ 100 ಮೀಟರ್‌ನಷ್ಟು ಇರಲಿದೆ. ಹಾಲಿ ಇರುವ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ರೀತಿಯಲ್ಲ್ಲೂ ಹಾನಿಯಾಗದಂತೆ ಈ ಫ್ಲೈಓವರ್ ವಿನ್ಯಾಸಗೊಳಿಸಲಾಗಿದೆ.

    ಸಿದ್ಧಗಂಗಾಮಠಕ್ಕೆ ತೆರಳುವ ಮಾರ್ಗದ ಕ್ಯಾತಸಂದ್ರ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಅಂಡರ್ ಬ್ರಿಡ್ಜ್ ಹಾಗೂ ಫೈಓವರ್ ನಿರ್ಮಾಣ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ನಿಗದಿತ ಸಮಯದೊಳಗೆ ಯೋಜನೆ ಪೂರ್ಣಗೊಳಿಸಿದರೆ ಒಳಿತು.
    ಸಿದ್ದಲಿಂಗಶ್ರೀಗಳು ಸಿದ್ಧಗಂಗಾ ಮಠಾಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts