More

    ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ; ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಬಸವ ಸಲಹೆ

    ರಾಯಚೂರು: ಹಿರಿಯ ನಾಗರಿಕರಿಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಹಿರಿಯ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಬಸವ ಹೇಳಿದರು.

    ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಶನಿವಾರ ಹಿರಿಯ ನಾಗರಿಕರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಅ.1ರಂದು ಆಚರಿಸಲ್ಪಡುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

    ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆ ಆಗುತ್ತಿದ್ದು, ಮನುಷ್ಯನಲ್ಲಿ ಮಾನವೀಯತೆ ಕಳೆದು ಹೋಗುತ್ತಿದೆ. ಒತ್ತಡದ ಜೀವನಕ್ಕೆ ಮಣಿದು ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ಕಳುಹಿಸಲಾಗುತ್ತಿದೆ. ತಂದೆ-ತಾಯಿಯನ್ನು ಗೌರವದಿಂದ ಕಂಡು ಅವರಿಗೆ ಸೇವೆ ಮಾಡುವ ನಡೆಯನ್ನು ಎಲ್ಲರೂ ಕಲಿತುಕೊಳ್ಳಬೇಕಾಗಿದೆ. ಇದನ್ನು ಎಲ್ಲ ಮಕ್ಕಳು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

    ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಉಂಟಾದರೆ ಹಿರಿಯ ನಾಗರಿಕರಿಗಾಗಿ ಸ್ಥಾಪಿಸಲಾದ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. 1456 ಸಂಖ್ಯೆಗೆ ಕರೆ ಮಾಡಿದರೆ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಸಿದ್ಧವಿರುತ್ತಾರೆ ಎಂದು ತಿಳಿಸಿದರು.

    ಎಲ್ಲ ಜಿಲ್ಲೆಗಳ ಪೊಲೀಸ್ ಅಧೀಕ್ಷಕರ ಕಚೇರಿ ಸಹಾಯವಾಣಿ ಇರುತ್ತದೆ. ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಸಲಹೆ ನೀಡಿದರು.

    ಹಿರಿಯ ನಾಗರಿಕ ವಿರುಪನಗೌಡ ಮಾತನಾಡಿ, ದೇಶದಲ್ಲಿ ಶೇ.70 ಹಿರಿಯರಿಗೆ ಆರೈಕೆ ಕೊರತೆಯಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಬೇಕು. ಜತೆಗೆ ಸರಳ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಉತ್ತಮವಾಗಿ ಜೀವಿಸುವಂತೆ ಸಲಹೆ ನೀಡಿದರು.

    ಇದೇವೇಳೆ ಜಿಲ್ಲೆಯ ಹಿರಿಯ ನಾಗರಿಕರಿಗೆ ಬಕೆಟ್‌ನಲ್ಲಿ ರಿಂಗ್ ಎಸೆಯುವ ಸ್ಪರ್ಧೆ, ಗಾಯನ ಸ್ಪರ್ಧೆ, 100 ಮೀ.ನಡಿಗೆ ಹಾಗೂ ಕುರ್ಚಿ ಆಟವನ್ನು ಏರ್ಪಡಿಸಲಾಗಿತ್ತು. ಸುರಕ್ಷಾ ಸಂಸ್ಥೆ ಅಧ್ಯಕ್ಷ ಪವನಕುಮಾರ, ಹಿರಿಯ ನಾಗರಿಕರ ಸಮಿತಿ ಮುಖ್ಯಸ್ಥೆ ಅಶೀಜಾ ಸುಲ್ತಾನ, ಶೇಖ್ ಅಸ್ತ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts