More

    ವೇತನಕ್ಕಾಗಿ ವಿದ್ಯುತ್ ಸ್ಥಾವರವೇರಿ ಪ್ರತಿಭಟನೆ

    ರಾಯಚೂರು: ವೇತನ ಸೌಲಭ್ಯ ಹಾಗೂ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಕಾರ್ಮಿಕನೊಬ್ಬ ಸೋಮವಾರ ಶಕ್ತಿನಗರ ಆರ್‌ಟಿಪಿಎಸ್‌ನ ವಿದ್ಯುತ್ ಸ್ಥಾವರವನ್ನೇರಿ ಪ್ರತಿಭಟನೆ ನಡೆಸಿದನು.

    ತಾಲೂಕಿನ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್ ವಿದ್ಯುತ್ ಘಟಕದ ಚಿಮಣಿ ಮೇಲೇರಿ ಕಾರ್ಮಿಕ ಸೂಗಪ್ಪ ಪ್ರತಿಭಟನೆ ನಡೆಸಿದ್ದಾನೆ. ಬೆಳಗ್ಗೆ ಆರ್‌ಟಿಪಿಎಸ್ ಕಾರ್ಮಿಕರಿಂದ ವೇತನ ಸೌಲಭ್ಯ, ಗುತ್ತಿಗೆ ಕಾರ್ಮಿಕರಿಗೆ ಪಿಎಫ್ ಸೇರಿ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿತ್ತು.

    ಸಂಬಳ ಹೆಚ್ಚಳ ಮಾಡುವಂತೆ ಹಲವು ವರ್ಷಗಳಿಂದ ಕಾರ್ಮಿಕರು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೋಲ್‌ಮಿಲ್ ಕೆಲಸಗಾರ ಸೂಗಪ್ಪ ಆರ್‌ಟಿಪಿಎಸ್‌ನ 8ನೇ ಸ್ಥಾವರವನ್ನೇರಿ ಪ್ರತಿಭಟನೆಗೆ ಮುಂದಾಗಿದ್ದಾನೆ. ಈತ 10 ವರ್ಷದಿಂದ ಆರ್‌ಟಿಪಿಎಸ್‌ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, 8 ತಿಂಗಳ ಹಿಂದೆ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಕೆಲಸಕ್ಕೆ ಮರುನೇಮಿಸಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿ ಸ್ಥಾವರವನ್ನೇರಿದ್ದಾನೆಂದು ತಿಳಿದುಬಂದಿದೆ.

    ಲಿಖಿತ ರೂಪದಲ್ಲಿ ಕಾರ್ಮಿಕರಿಗೆ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆರ್‌ಟಿಪಿಎಸ್ ಯೋಜನಾ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸಿಎಂ ದಿವಾಕರ್ ಆಗಮಿಸಿ, ಕಾರ್ಮಿಕರ ಸಮಸ್ಯೆಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಗುತ್ತಿಗೆ ಕರಾರು ಪ್ರಕಾರ ಬಗೆಹರಿಸಲಾಗುವುದು ಹಾಗೂ ತಿಂಗಳ ವೇತನವನ್ನು ಸೂಕ್ತವಾಗಿ ಪಾವತಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಕಾರ್ಮಿಕರಿಗೆ ಭರವಸೆ ನೀಡಿದರು. ವಾರದೊಳಗೆ ಗುತ್ತಿಗೆದಾರರು, ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕ ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಿ ಕಾರ್ಮಿಕರ ಹಿತ ಚಿಂತನೆಯ ಸಭೆಯ ನಡಾವಳಿಗಳನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts