More

    ರಾಜ್ಯಾದ್ಯಂತ ಸಂವಿಧಾನ ರಕ್ಷಿಸಿ ಜನಾಂದೋಲನ

    ರಾಯಚೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಮತ್ತು ದಲಿತ ಸಂಘರ್ಷ ಸಮಿತಿಯಿಂದ ಒಂದು ವರ್ಷಗಳ ಕಾಲ ರಾಜ್ಯದಲ್ಲಿ ಸಂವಿಧಾನ ರಕ್ಷಿಸಿ ಜನಾಂದೋಲನ ನಡೆಸಲಾಗುತ್ತಿದೆ ಎಂದು ಪಕ್ಷದ ಅಧ್ಯಕ್ಷ ಎನ್.ಮೂರ್ತಿ ತಿಳಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಮೊದಲ ಹಂತದ ಆಂದೋಲನ ಮುಗಿಸಲಾಗಿದ್ದು, ಗದಗನಿಂದ 2ನೇ ಹಂತದ ಆಂದೋಲನ ಆರಂಭಿಸಲಾಗಿದೆ. ಬಹಿರಂಗ ಸಭೆ, ವಿಚಾರ ಸಂಕಿರಣ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಇತರ ಪಕ್ಷಗಳಿಂದ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಅಸಮಾನತೆ, ನಿರುದ್ಯೋಗ, ಬಡತನ ನಿವಾರಣೆಯಾಗುತ್ತಿಲ್ಲ. ಶೇ.85ರಷ್ಟಿರುವ ಎಸ್ಸಿ, ಎಸ್ಟಿ, ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಅಗತ್ಯ ಸೌಲಭ್ಯಗಳು ಮತ್ತು ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಂವಿಧಾನ ವಿರೋಧಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೋಲಿಸಲು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದ್ದು, ಈಗಾಗಲೇ 142 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

    ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನ ವಿರೋಧಿಯಾಗಿದ್ದು, ಬಡತನ, ನಿರುದ್ಯೋಗ ನಿವಾರಣೆಗೆ ಒತ್ತು ನೀಡಲಾಗಿಲ್ಲ. ಉದ್ಯೋಗ ಖಾತ್ರಿ, ವಿದ್ಯಾರ್ಥಿ ವೇತನಗಳ ಅನುದಾನ ಕಡಿತಗೊಳಿಸಲಾಗಿದೆ. ರೈತರು, ಕಾರ್ಮಿಕರ ಕಲ್ಯಾಣವನ್ನು ಮರೆಯಲಾಗಿದೆ ಎಂದು ಎನ್.ಮೂರ್ತಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ದಸಂಸ ಪದಾಧಿಕಾರಿಗಳಾದ ಬಸವರಾಜ ಸಾಸಲಮರಿ, ಅಶೋಕ ನಂಜಲದಿನ್ನಿ, ಕೋದಂಡರಾಮ, ಬೈಲಹೊನ್ನಯ್ಯ, ಜೈರಾಜ, ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts