More

    ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ರಾಯಚೂರು ಸನ್ನದ್ಧ ; ಐದು ದಿನ ನಡೆಯಲಿವೆ ಪಂದ್ಯಾವಳಿ

    495 ಕ್ರೀಡಾಪಟುಗಳ ನೋಂದಣಿ | ಭಾಗಿಯಾಗಲಿದ್ದಾರೆ ರಾಷ್ಟ್ರಮಟ್ಟದ ಖ್ಯಾತಿಯ ಆಟಗಾರರು


    ರಾಯಚೂರು: ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ (ಅ.4-8) ರಾಯಚೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಂಡಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

    ಒಳಾಂಗಣ ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಆರು ಕೋರ್ಟ್‌ಗಳ ಕಟ್ಟಿಗೆ ನೆಲಹಾಸಿನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 495 ಕ್ರೀಡಾಪಟುಗಳು ನೋಂದಣಿ ಮಾಡಿಸಿಕೊಂಡಿದ್ದು, 300ಕ್ಕೂ ಹೆಚ್ಚು ಕ್ರೀಡಾಪಟುಗಳು ನಗರಕ್ಕೆ ಆಗಮಿಸಿದ್ದಾರೆ. ಐದು ವರ್ಷಗಳ ಹಿಂದೆ ಪಂದ್ಯಾವಳಿ ಜರುಗಿತ್ತು. ಆಗ ಒಳಾಂಗಣ ಕ್ರೀಡಾಂಗಣದಲ್ಲಿ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಪ್ರಸ್ತುತ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಜತೆಗೆ ರಾಜ್ಯ ಮಟ್ಟದ ಒಳಾಂಗಣ ಕ್ರೀಡಾಂಗಣದಲ್ಲಿರುವಂತೆ ಕಟ್ಟಿಗೆ ನೆಲಹಾಸು, ಪ್ರೇಕ್ಷಕರ ಗ್ಯಾಲರಿ ಸೇರಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರಿಂದ ಈ ಬಾರಿಯ ಪಂದ್ಯಾವಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗಹಿಸುವಂತಾಗಿದೆ.

    ಪಂದ್ಯಾವಳಿಯಲ್ಲಿ 19 ವರ್ಷದ ಒಳಗಿನ, 19 ವರ್ಷ ಮೇಲ್ಪಟ್ಟ, 45 ವರ್ಷ ಮೇಲ್ಪಟ್ಟ ವಯೋಮಾನದ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ಭಾಗಹಿಸುವ ಕ್ರೀಡಾಪಟುಗಳಿಗೆ ಹೋಟೆಲ್‌ನಲ್ಲಿ ಉಚಿತ ವಸತಿ ಹಾಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯಾವಳಿಯ ನಿರ್ಣಾಯಕರಾಗಿ ರಾಷ್ಟ್ರ ಮಟ್ಟದ ಅನುಭವೀ ನಿರ್ಣಾಯಕರು ಕಾರ್ಯನಿರ್ವಹಿಸಲಿದ್ದಾರೆ. ಅಗ್ರ ಶ್ರೇಯಾಂಕಿತ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪಂದ್ಯಾವಳಿಯ ಮೌಲ್ಯ ಹೆಚ್ಚಿದೆ.


    ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಕ್ರೀಡಾಂಗಣದಲ್ಲಿರುವಂತಹ ಕಟ್ಟಿಗೆ ನೆಲಹಾಸು ಹೊಂದಿರುವ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತೋಷವೆನಿಸುತ್ತಿದೆ.
    | ಜಿ.ಕಿರಣಕುಮಾರ ರಾಜ್ಯ ಒಂದನೇ ಶ್ರೇಯಾಂಕಿತ ಮಿಕ್ಸ್ ಡಬಲ್ ಕ್ರೀಡಾಪಟು, ಬೆಂಗಳೂರು


    ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಅವಕಾಶ ಇಲ್ಲದಿದ್ದರೂ ಎಲ್ಲ ಕ್ರೀಡಾಪಟುಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಮಟ್ಟದ ಪಂದ್ಯಾವಳಿ ನಗರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
    | ಕಿರಣ್ ಬೆಲ್ಲಂ ಅಧ್ಯಕ್ಷ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts