More

    ವೇತನ ಪರಿಷ್ಕರಣೆಗಾಗಿ ಕರ್ತವ್ಯಕ್ಕೆ ಗೈರು

    ರಾಯಚೂರು: ವೇತನ, ಭತ್ಯೆ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮಾ.1ರಿಂದ ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ ತಿಳಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವೇತನ, ಭತ್ಯೆ ಪರಿಷ್ಕರಣೆ ಕುರಿತು ಯಾವುದೇ ಪ್ರಸ್ತಾಪ ಮಾಡದೇ ನೌಕರರ ನಿರೀಕ್ಷೆ ಹುಸಿಗೊಳಿಸಿದ್ದು, 50ಕ್ಕೂ ಹೆಚ್ಚು ವಿವಿಧ ವೃಂದದ ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ಸಭೆ ನಡೆಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

    ವೇತನ, ಭತ್ಯೆ ಪರಿಷ್ಕರಣೆ ಕುರಿತು ಅನೇಕ ಬಾರಿ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು, ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದರೂ ಸ್ಪಂದನೆ ದೊರಕಿಲ್ಲ. ಕಳೆದೊಂದು ದಶಕದಿಂದ ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸಲಾಗುತ್ತಿದ್ದರೂ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ದೂರಿದರು.

    ಏಳನೇ ವೇತನ ಆಯೋಗವನ್ನು ಸುಧಾಕರರಾವ್ ನೇತೃತ್ವದಲ್ಲಿ ರಚಿಸಲಾಗಿದ್ದು 2022 ರಿಂದ ಜಾರಿಗೊಳಿಸಬೇಕಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಭತ್ಯೆಗಳನ್ನು ಹೆಚ್ಚಿಸದೇ ಇರುವುದರಿಂದ ಅನಿವಾರ್ಯವಾಗಿ ಹೋರಾಟಕ್ಕೆ ಮುಂದಾಗಬೇಕಿದೆ. ಡಿ ಗ್ರೂಪ್ ನೌಕರರಿಂದ ಹಿಡಿದು ಎಲ್ಲ ಹಂತದ ವಿವಿಧ ಇಲಾಖೆಗಳ ನೌಕರರರು ಸೇವೆಗೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಪ್ರಭಾವಕ್ಕೆ ಒಳಗಾಗಿ ಸೇವೆಗೆ ಹಾಜರಾಗದೇ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮಹಾಂತೇಶ ಬಿರಾದರ ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಡಾ.ಶಂಕರಗೌಡ ಪಾಟೀಲ್, ಆಂಜಿನೇಯ, ಸುರೇಶ, ವೆಂಕಪ್ಪ, ಸಂಗಮೇಶ, ಹನುಮಂತಪ್ಪ, ಇಸ್ಮಾಯಿಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts