More

    ಸಿಗಂದೂರು ಚೌಡೇಶ್ವರಿ ತಂಟೆಗೆ ಬಂದರೆ ಸುಮ್ಮನಿರಲ್ಲ- ರಾಷ್ಟ್ರೀಯ ಆರ್ಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ

    ರಾಯಚೂರು: ಈಡಿಗ ಸಮುದಾಯದ ರಾಮಪ್ಪಜ್ಜ ಹೆಗಲ ಮೇಲೆ ಮಣ್ಣು, ಇಟ್ಟಿಗೆ ಹೊತ್ತು ಕಟ್ಟಿದ ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ಕುತಂತ್ರವನ್ನು ಕೈಬಿಡದಿದ್ದರೆ ಸಮಾಜದ ಜನರು ಸುಮ್ಮನಿರುವುದಿಲ್ಲ ಎಂದು ರಾಷ್ಟ್ರೀಯ ಆರ್ಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗ ನೇರವಾಗಿ ನಡೆಸುತ್ತಿರುವ ಏಕೈಕ ದೇಗುಲ ಸಿಗಂದೂರು ಚೌಡೇಶ್ವರಿ ದೇವಸ್ಥಾನವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲಾಗುತ್ತದೆ ಎಂದು ನೋಟಿಸ್ ನೀಡಲಾಗಿದೆ. ದೇವಸ್ಥಾನ ಅಭಿವೃದ್ಧಿ ಆಗುತ್ತಿರುವುದನ್ನು ಕಂಡು ದೇವಸ್ಥಾನ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ವಾಪಸ್ ಪಡೆಯದಿದ್ದರೆ ಸಮಾಜದ 26 ಪಂಗಡಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರಾಜ್ಯದಲ್ಲಿ ಈಡಿಗ ಸಮುದಾಯದವರು ಮತಾಂತರಕ್ಕೆ ಬಲಿಯಾಗುತ್ತಿದ್ದಾರೆ. ಯಾದಗಿರಿ, ಸಿಂಧನೂರು, ಗಂಗಾವತಿಯಲ್ಲಿ ಹೆಚ್ಚಿನ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿವೆ. ಈಗಾಗಲೇ ಅವರನ್ನು ಭೇಟಿಯಾಗಿ ವಾಪಸ್ ಕರೆತರುವ ಕೆಲಸ ನಡೆಯುತ್ತಿದೆ. 150ಕ್ಕೂ ಹೆಚ್ಚು ಕುಟುಂಬಗಳು ವಾಪಸ್ ಬರಲು ಒಪ್ಪಿವೆ. ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಶೀಘ್ರ ಜಾರಿಗೊಳಿಸಬೇಕಾಗಿದೆ ಎಂದರು.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇಂದಿ ಇಳಿಸುವುದನ್ನು ನಿಷೇಧಿಸಿರುವುದರಿಂದ ಅದರ ಮೇಲೆ ಅವಲಂಬಿತರಾಗಿದ್ದ ಈಡಿಗ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಗೂ ಪಕ್ಕದ ರಾಜ್ಯಗಳಲ್ಲಿ ಅವಕಾಶವಿದ್ದರೂ ಸಮಾಜದ ಜನರು ಮುಂದೆ ಬರಬಾರದು ಎನ್ನುವ ಕಾರಣಕ್ಕೆ ಸೇಂದಿ ಇಳಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ದೂರಿದರು. ಮುಖಂಡರಾದ ರಾಘವೇಂದ್ರ ಗೌಡ, ಸತೀಶ, ಮಹೇಶ ಗೌಡ, ಗುರುರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts