More

    ವಿದ್ಯಾರ್ಥಿ ವೇತನ ರದ್ದತಿ ಹಿಂಪಡೆಯಲು ಛಲವಾದಿ ಯುವ ಬ್ರಿಗೇಡ್ ಒತ್ತಾಯ

    ರಾಯಚೂರು: ಕೇಂದ್ರ ಸರ್ಕಾರ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿರುವುದನ್ನು ಕೈಬಿಡುವ ಮೂಲಕ ಹಿಂದಿನಂತೆ ನೀಡಬೇಕು ಎಂದು ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೈನ್ಯ ಮತ್ತು ಛಲವಾದಿ ಯುವ ಬ್ರಿಗೇಡ್ ಜಿಲ್ಲಾಡಳಿತಕ್ಕೆ ಒತ್ತಾಯಿಸಿವೆ.

    ಸಂಘಟನೆಗಳ ನಿಯೋಗ ಪ್ರತ್ಯೇಕವಾಗಿ ಜಿಲ್ಲಾದಿಕಾರಿ ಚಂದ್ರಶೇಖರ ನಾಯಕಗೆ ಮಂಗಳವಾರ ಮನವಿ ಸಲ್ಲಿಸಿ, ವಿದ್ಯಾರ್ಥಿ ವೇತನ ರದ್ದುಗೊಳಿಸಿದರೆ ಅನೇಕ ಬಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದರು. ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಶೇ.75 ಹಾಗೂ ರಾಜ್ಯ ಸರ್ಕಾರದಿಂದ ಶೇ.25 ಪಾಲುದಾರಿಕೆಯಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಆರ್‌ಟಿಇ, ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಬರುವುದರಿಂದ ವಿದ್ಯಾರ್ಥಿ ವೇತನ ಅಗತ್ಯವಿಲ್ಲ ಎಂದು ರದ್ದುಗೊಳಿಸಿದೆ.

    ಬಡ ಮಕ್ಕಳು ಶಿಕ್ಷಣ ಪಡೆಯದೆ ಗುಲಾಮರಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ನೀತಿಯಾಗಿದ್ದು, ಇದರಿಂದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವಂತಾಗಲಿದೆ. ಕಾರಣ ಕೂಡಲೇ ಹಿಂದಿನಂತೆ ವಿದ್ಯಾರ್ಥಿ ವೇತನ ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೈನ್ಯದ ನಿಯೋಗದಲ್ಲಿ ವಿಭಾಗೀಯ ಅಧ್ಯಕ್ಷ ಹನುಮಂತು, ಪದಾಧಿಕಾರಿಗಳಾದ ಈರಣ್ಣ, ಪ್ರಕಾಶ, ರಾಜು, ಗ್ಯಾನಯ್ಯ, ಛಲವಾದಿ ಯುವ ಬ್ರಿಗೇಡ್ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಕೆ.ಇ.ಕುಮಾರ, ಮಲ್ಲೇಶ ಕೊಲಮಿ, ಪ್ರಾಣೇಶ ಮಂಚಾಲ, ಎಂ.ಮಾರೆಪ್ಪ, ನರಸಿಂಹಲು, ಯಲ್ಲಪ್ಪ, ಬಿ.ಕೆ.ಬಾಬು, ಶ್ರೀನಿವಾಸ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts