More

    ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ವಿತರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್

    ರಾಯಚೂರು: ನಿರಂತರ ಮಳೆಯಿಂದಾಗಿ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರಗತಿಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಡಿ.1ರ ನಂತರದಲ್ಲಿ ಪರಿಹಾರ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

    ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು. ರೈತರಿಗೆ ಕೇಂದ್ರ ಸರ್ಕಾರದ ನಿಯಮಕ್ಕಿಂತ ಹೆಚ್ಚಿನ ಪರಿಹಾರ ದೊರೆಯುವಂತೆ ಪ್ರಯತ್ನಿಸಲಾಗುವುದು. ವಿಶೇಷ ಸಂದರ್ಭ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

    ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಸಂಬಂಧಿಕರಿಗೆ ಟಿಕೆಟ್ ನೀಡಿದೆ. ಬಿಜೆಪಿ ಸಾಮಾಜಿಕ ನ್ಯಾಯವನ್ನು ಪರಿಗಣಿಸಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆದಿದ್ದು, ಯಾರೂ ಯಾವ ಪಕ್ಷದ ಬೆಂಬಲಿಗರು ಎಂದು ಹೇಳಲು ಸಾಧ್ಯವಿಲ್ಲ. ಗ್ರಾಮ ಮಟ್ಟದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಕಾಂಗ್ರೆಸ್ ನಾಯಕರು ನಮ್ಮ ಬೆಂಬಲಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಅಂತೆಕಂತೆ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹಾಲಪ್ಪ ಆಚಾರ್ ಹೇಳಿದರು.

    ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ಬಸವರಾಜ ದಢೇಸುಗೂರು, ಪರಣ್ಣ ಮನವಳ್ಳಿ ಇದ್ದರು.

    ಮನವಿ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಶೀಘ್ರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಒತ್ತಾಯಿಸಿದ್ದಾರೆ. ಈ ಕುರಿತು ನಗರದ ಹೊರವಲಯದ ಯರಮರಸ್ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ಗೆ ಮಂಗಳವಾರ ಮನವಿ ಸಲ್ಲಿಸಿ, ಸರ್ಕಾರ ಎನ್‌ಡಿಆರ್‌ಎಫ್ ಪ್ರಕಾರ ನೀಡುವ ಪರಿಹಾರ ರೈತರಿಗೆ ಸಾಲುವುದಿಲ್ಲ. ಹೆಚ್ಚಿನ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆ ಹಾನಿಗೊಳಗಾಗಿದೆ. ಇದರಿಂದ ರೈತರಿಗೆ ಪ್ರತಿ ಎಕರೆಗೆ 50 ರಿಂದ 60 ಸಾವಿರ ರೂ.ವರೆಗೆ ನಷ್ಟವುಂಟಾಗಿದೆ. ಹೆಚ್ಚಿನ ಪರಿಹಾರ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts