More

    ಏಮ್ಸ್‌ಗೆ ಪ್ರಯತ್ನಿಸದ ಜನಪ್ರತಿನಿಧಿಗಳ ವಿರುದ್ಧ ಕಾವ್ಯಾಕ್ರೋಶ

    ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರಾತಿಗಾಗಿ ಕಳೆದ 255 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಸಂದಿಸದ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಕವಿಗಳು ತಮ್ಮ ಕವನಗಳಲ್ಲಿ ಮೊನಚಾದ ಶಬ್ದ ಬಳಸಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಭಾನುವಾರ ಕವಿಗಳು ವಾಚಿಸಿದ ಕವನಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಕಂಡು ಬಂದಿತು.

    ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ, ಭೌಗೋಳಿಕ ಶ್ರೀಮಂತಿಕೆ ತಿಳಿಸುವ ಜತೆಗೆ ಜಿಲ್ಲೆ ಹಿಂದುಳಿಯುವಿಕೆಗೆ ಕಾರಣ ಮತ್ತು ಪ್ರತಿ ವಿಷಯದಲ್ಲೂ ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ಕವಿಗಳು ಶಬ್ದಗಳ ಮೂಲಕ ಅಭಿವ್ಯಕ್ತಿಗೊಳಿಸಿದರು.
    ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಾಹಿತಿ ವೀರ ಹನುಮಾನ, ಸಾಹಿತಿಗಳು ಸಮಾಜದಲ್ಲಿನ ತಲ್ಲಣಗಳಿಗೆ ಸ್ಪಂದಿಸಿದಾಗ ಅವರ ಸಾಹಿತ್ಯಕ್ಕೆ ಮತ್ತು ಅವರಿಗೆ ಬೆಲೆ ಬರುತ್ತದೆ. ಸಾಹಿತ್ಯದ ಮೂಲಕ ಹೋರಾಟವನ್ನು ನಡೆಸಿದ ಶರಣರು, ಹರಿದಾಸರು ಸಮಾಜದಲ್ಲಿನ ತಲ್ಲಣಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದರು. ನಂತರದಲ್ಲಿ ದಲಿತ, ಬಂಡಾಯ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ತಲ್ಲಣಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.

    ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ 255 ದಿನಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದ್ದರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಎಲ್ಲ ರೀತಿಯ ಸಂಪತ್ತು ಇದ್ದರೂ ಜನರು ಮಾತ್ರ ಬಡವರಾಗಿದ್ದೇವೆ. ನಮ್ಮಲ್ಲಿ ಕೇಳುವ ಮನೋಭಾವ ಇಲ್ಲದ ಕಾರಣ ರಾಜಕಾರಣಿಗಳು ಕೊಬ್ಬಿದ್ದಾರೆ. ಐಐಟಿ ಕಿತ್ತುಕೊಂಡರೂ ಅಸಹಾಯಕತೆ ವ್ಯಕ್ತಪಡಿಸಿದ್ದೇವೆ. ಆದರೆ ಏಮ್ಸ್ ಮಂಜೂರಿಗಾಗಿ ಪ್ರಾಣ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಆಂಜನೇಯ ಜಾಲಿಬೆಂಚಿ, ದೇವೇಂದ್ರಗೌಡ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಪದಾಧಿಕಾರಿಗಳಾದ ವಿಜಯರಾಜೇಂದ್ರ, ಜಾನ್‌ವೆಸ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts