More

    ಭತ್ತದ ಗುಣಮಟ್ಟ ಪರೀಕ್ಷೆ ಸಲ್ಲ, ನೆಲ್ಲು ಬೆಳೆದ ರೈತರ ಒತ್ತಾಯ

    ಕ್ವಾಲಿಟಿ ಹೆಸರಲ್ಲಿ ತಿರಸ್ಕಾರಕ್ಕೆ ಆಕ್ರೋಶ


    ರಾಯಚೂರು: ಗುಣಮುಟ್ಟದ ಹೆಸರಿನಲ್ಲಿ ತಾವು ತಂದ ಭತ್ತವನ್ನು ಖರೀದಿ ಕೇಂದ್ರಗಳ ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆಂದು ಆರೋಪಿಸಿದ ರೈತರು, ಎಪಿಎಂಸಿ ಆವರಣದಲ್ಲಿರುವ ಭತ್ತ ಖರೀದಿ ಕೇಂದ್ರದಲ್ಲಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

    ನೋಂದಣಿ ವೇಳೆ ಭತ್ತದ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗುತ್ತಿದೆ, ಕ್ವಾಲಿಟಿ ಸರಿ ಇಲ್ಲ ಎಂದು ಹೇಳಿ 50ಕ್ಕೂ ಹೆಚ್ಚು ರೈತರು ತಂದ ಭತ್ತವನ್ನು ತಿರಸ್ಕರಿಸಲಾಗಿದೆ. ಕೋವಿಡ್ ಸಂದರ್ಭ ಸಂಕಷ್ಟ ಎದುರಿಸುತ್ತಿರುವ ರೈತರು ತಂದ ಭತ್ತದ ಗುಣಮಟ್ಟ ಪರೀಕ್ಷೆ ಮಾಡದೇ ಖರೀದಿಸಬೇಕು ಎಂದು ಒತ್ತಾಯಿಸಿದರು.

    ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡಿ 25 ದಿನಗಳಾಗಿವೆ. ಆದರೆ, ಇಲ್ಲಿಯವರೆಗೆ ರೈತರಿಂದ ಭತ್ತ ಖರೀದಿ ಮಾಡಿಲ್ಲ. ಈಗಾಗಲೇ ಕೇಂದ್ರದಲ್ಲಿ 750 ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿದ್ದಾರೆ. ಅವರಿಂದ ಭತ್ತ ಖರೀದಿಸುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಭತ್ತ ಕಟಾವು ಪೂರ್ಣಗೊಂಡಿದ್ದು, ರೈತರು ಭತ್ತವನ್ನು ಹೊಲಗಳಲ್ಲಿ ಶೇಖರಣೆ ಮಾಡಿದ್ದಾರೆ. ಮಳೆ ಬರುತ್ತಿರುವುದರಿಂದ ಭತ್ತ ತೊಯ್ದು ಮೊಳಕೆ ಒಡೆಯುವ ಅಪಾಯವಿದ್ದು, ಇದರಿಂದ ರೈತರು ನಷ್ಟಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಸಣ್ಣ ರೈತರು ಗೋದಾಮಿನಲ್ಲಿಟ್ಟು ಶುಲ್ಕ ಭರಿಸುವ ಸಾಮಥ್ಯವನ್ನು ಹೊಂದಿಲ್ಲದ ಕಾರಣ ಬಯಲಿನಲ್ಲೇ ರಾಶಿ ಹಾಕಿದ್ದಾರೆ. ಹಿಂದೆ ಗುಣಮಟ್ಟ ಪರಿಶೀಲನೆ ಮಾಡದೆಯೆ ಖರೀದಿ ಸಲಾಗುತ್ತಿತ್ತು. ಅದರಂತೆ ಈ ಬಾರಿಯೂ ಎ ಮತ್ತು ಬಿ ಗ್ರೇಡ್‌ನಲ್ಲಿರುವ ಭತ್ತವನ್ನು ಖರೀದಿಸಬೇಕು. ನೋಂದಣಿ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಸ್ಥಳಕ್ಕೆ ಆಗಮಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅರುಣಕುಮಾರ ಸಂಗಾವಿ ಮಾತನಾಡಿ, ಖರೀದಿ ಕೇಂದ್ರದಲ್ಲಿ ಗುಣಮಟ್ಟ ಪರಿಶೀಲನೆ ಮಾಡಲು ಸರ್ಕಾರದ ನಿರ್ದೇಶನವಿದೆ. ರೈತರು ಗುಣಮಟ್ಟ ಪರಿಶೀಲನೆ ಮಾಡದೆಯೆ ಖರೀದಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಧಿಕಾರಿಗಳಾದ ಖಾಜಪ್ಪ ಅರಶಿಣಗಿ, ಗಂಗಾಧರಗೌಡ, ಮಲ್ಲೇಶ ಡಿ.ರಾಂಪುರ ಹಾಗೂ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts