More

    ಭತ್ತ ಹುಲ್ಲಿನ ಬೇಲ್ ತಯಾರಿಕೆಯಿಂದ ರೈತರಿಗೆ ಆದಾಯ

    ರಾಯಚೂರು: ಭತ್ತದ ಹುಲ್ಲನ್ನು ಸಮರ್ಪಕ ರೀತಿಯಲ್ಲಿ ದಾಸ್ತಾನು ಮಾಡದಿದ್ದರೆ ಹುಲ್ಲು ಹಾಳಾಗುವ ಸಾಧ್ಯತೆಗಳಿದ್ದು, ಹುಲ್ಲನ್ನು ಬೇಲ್ ಮಾಡಿ ಬಳಕೆ ಮಾಡುವುದರಿಂದ ಹಾಳಾಗುವುದನ್ನು ತಡೆಯುವ ಜತೆಗೆ ಮಾರಾಟ ಮಾಡಿ ರೈತರು ಆದಾಯ ಗಳಿಸಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಟಿ.ವೀಣಾ ಹೇಳಿದರು.

    ತಾಲೂಕಿನ ಮಂಡಲಗೇರಾ ಗ್ರಾದಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ತಾಂತ್ರಿಕ ಮಹಾ ವಿದ್ಯಾಲಯ ರೈತರಿಗಾಗಿ ಮಂಗಳವಾರ ಏರ್ಪಡಿಸಿದ್ದ ಭತ್ತದ ಹುಲ್ಲಿನ ಬೇಲ್ ತಯಾರಿಸುವ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಬೇಲ್ ಮಾಡುವ ಮೂಲಕ ಭತ್ತದ ಹುಲ್ಲನ್ನು ಸುರಕ್ಷಿತವಾಗಿ ಹಾಗೂ ಬಹುಕಾಲದವರೆಗೆ ಸಂಗ್ರಹಿಸಲು ಸಾಧ್ಯವಾಗಲಿದೆ ಎಂದರು.

    ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೃಷಿ ಯಂತ್ರೋಪಕರಣಗಳು ಸಹಕಾರಿಯಾಗಿದ್ದು, ರೈತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಭತ್ತ ಕಟಾವು ಮಾಡಿದ ನಂತರ ಹೊಲದಲ್ಲಿ ಉಳಿದ ಒಣ ಹುಲ್ಲನ್ನು ಒಗ್ಗೂಡಿಸಿ ಬಿಗಿಯಾಗಿ ವೃತ್ತಾಕಾರ ಅಥವಾ ಚೌಕಾಕಾರದ ಬೇಲ್‌ಗಳನ್ನು ಮಾಡುವ ಯಂತ್ರ ರೈತರಿಗೆ ಉಪಯೋಗಕಾರಿಯಾಗಿದೆ. ಯಂತ್ರದಿಂದ ಕಾರ್ಮಿಕರ ಖರ್ಚು ಮತ್ತು ಸಮಯವನ್ನು ಉಳಿಸಬಹುದಾಗಿದೆ ಎಂದು ಹೇಳಿದರು.

    ಕೃಷಿ ವಿಜ್ಞಾನಗಳ ವಿವಿ ಪ್ರಾಧ್ಯಾಪಕ ಡಾ.ದೇವಾನಂದ ಮಸ್ಕಿ ಮಾತನಾಡಿ, ರೈತರು ಕಟಾವು ನಂತರ ಹುಲ್ಲಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪರಿಸರಕ್ಕೂ ಹಾನಿಯಾಗುವ ಜತೆಗೆ ಹುಲ್ಲು ಉಪಯೋಗಕ್ಕೆ ಬಾರದಂತಾಗಲಿದೆ. ಬೇಲರ್ ಯಂತ್ರದಿಂದ ಜಮೀನಿನಲ್ಲೇ ಭತ್ತದ ಹುಲ್ಲನ್ನು ಬೇಲ್‌ಗಳನ್ನಾಗಿ ತಯಾರಿಸಿ ಇಟ್ಟುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಕೃಷಿ ವಿಜ್ಞಾನಿ ನವೀನ್, ಗ್ರಾಮದ ಮುಖಂಡ ಮಲ್ಲನಗೌಡ ಹಾಗೂ ಸುತ್ತಮುತ್ತಲ ಗ್ರಾಮಗಳ 40ಕ್ಕೂ ಹೆಚ್ಚು ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts