More

    ರಾಯಚೂರು ನಗರಸಭೆಗೆ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಲಲಿತಾ ಕಡಗೋಲ

    ರಾಯಚೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ರಾಯಚೂರು ನಗರಸಭೆ ಅಧ್ಯಕ್ಷರ ಚುನಾವಣೆ ಫಲಿತಾಂಶವನ್ನು ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್ ಗುರುವಾರ ಘೋಷಣೆ ಮಾಡಿದ್ದರಿಂದ ಅಧ್ಯಕ್ಷೆಯಾಗಿ ಲಲಿತಾ ಕಡಗೋಲ ನಗರಸಭೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

    ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್ ನಗರಸಭೆ ಕಚೇರಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಲಿತಾ ಕಡಗೋಲ 19 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಾಜೀದ್ ಸಮೀರ್ 15 ಮತಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

    ಹೈಕೋಟ್ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದ್ದಿಲ್ಲ. ಬುಧವಾರ ಸಂಜೆ ಹೈಕೋರ್ಟ್‌ನಿಂದ ಫಲಿತಾಂಶ ಘೋಷಣೆಗೆ ಫ್ಯಾಕ್ಸ್ ಮೂಲಕ ಆದೇಶ ಬಂದಿದ್ದು, ಮುಚ್ಚಿದ ಲಕೋಟೆಯಲ್ಲಿದ್ದ ರೇಣಮ್ಮ ಮತವನ್ನು ಬಹಿರಂಗ ಪಡಿಸುವಂತೆ ತಿಳಿಸಿದ್ದು, ಅವರು ಸಾಜೀದ್ ಸಮೀರ್‌ಗೆ ಮತ ಚಲಾಯಿಸಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಪುರ ಮತ್ತು ಪಕ್ಷೇತರ ಸದಸ್ಯೆ ರೇಣಮ್ಮರಿಗೆ ಮತದಾನದ ಹಕ್ಕು ನೀಡುವ ವಿಷಯದಲ್ಲಿ ಹೈಕೋರ್ಟ್ ನಿರ್ದೇಶನವನ್ನು ಪಾಲಿಸಲಾಗಿದೆ. ಇಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತು ಕಾನೂನಿನಲ್ಲಿ ಇರುವ ಅವಕಾಶ ಪರಿಶೀಲಿಸಿ ಕ್ರಮಕೈಗೊಳ್ಳಲಾಗಿದೆ. ಇದರಲ್ಲಿ ಯಾರ ಒತ್ತಡವೂ ಇರಲಿಲ್ಲ ಎಂದು ರಜನಿಕಾಂತ ಚವ್ಹಾಣ್ ತಿಳಿಸಿದರು.

    ಈ ಸಂದರ್ಭದಲ್ಲಿ ನಗರ ಶಾಸಕ ಡಾ. ಶಿವರಾಜ ಪಾಟೀಲ್, ಮಾಜಿ ಶಾಸಕ ಎ. ಪಾಪಾರೆಡ್ಡಿ, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ನಗರಸಭೆ ಸದಸ್ಯರಾದ ಈ. ಶಶಿರಾಜ, ಶರಣಗೌಡ ಬಲ್ಲಟಗಿ, ಜಿ.ಪಂ. ಮಾಜಿ ಸದಸ್ಯ ಸತೀಶಕುಮಾರ, ಮುಖಂಡರಾದ ರವೀಂದ್ರ ಜಲ್ದಾರ್, ಆಂಜಿನಯ್ಯ ಕಡಗೋಲ, ಬಿ.ಗೋವಿಂದ, ಹರೀಶ ನಾಡಗೌಡ, ಪೌರಾಯುಕ್ತ ಕೆ. ಮುನಿಸ್ವಾಮಿ ಇದ್ದರು.

    ಮೂಲ ಸೌಕರ್ಯಕ್ಕೆ ಒತ್ತು: ಕುಡಿವ ನೀರು, ಸ್ವಚ್ಛತೆ ಮತ್ತು ಬೀದಿ ದೀಪ ಸೇರಿ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ನಗರಸಭೆ ನೂತನ ಅಧ್ಯಕ್ಷೆ ಲಲಿತಾ ಕಡಗೋಲ ತಿಳಿಸಿದರು. ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

    ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ನಗರದಲ್ಲಿ ಕುಡಿವ ನೀರು ಸರಬರಾಜಿನಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ಶೀಘ್ರವೇ ನಿವಾರಿಸುವ ಜತೆಗೆ, ನಗರ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಐಪಿಎಸ್ ಸಮಸ್ಯೆಯಿಂದ ಕಳೆದ ಐದು ದಿನಗಳಿಂದ ನೀರು ಸರಬರಾಜಿನಲ್ಲಿ ತೊಂದರೆಯುಂಟಾಗಿದೆ. ಜಾಕ್‌ವೆಲ್‌ನಲ್ಲಿ ಒಂದು ಪಂಪ್‌ಸೆಟ್ ಕೆಟ್ಟಿದ್ದು, ವಾರದಲ್ಲಿ ದುರಸ್ತಿಗೊಳಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts