More

    ಕರ ವಸೂಲಿಯಲ್ಲಿ ಶೇ.100 ಪ್ರಗತಿ ಸಾಧಿಸಿ; ಜಿಪಂ ಸಿಇಒ ಶಶಿಧರ ಕುರೇರ ಸಲಹೆ

    ರಾಯಚೂರು: ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿಗಾರರ ಹುದ್ದೆ ಬಹುಮುಖ್ಯವಾಗಿದ್ದು, ಪ್ರತಿ ಗ್ರಾಪಂ ಕರ ವಸೂಲಿಗಾರರು ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಶೇ.100 ಪ್ರಗತಿ ಸಾಧಿಸಬೇಕೆಂದು ಜಿಪಂ ಸಿಇಒ ಶಶಿಧರ ಕುರೇರ ಹೇಳಿದರು.

    ಜಿಪಂ ಸಭಾಂಗಣದಲ್ಲಿ ವಿವಿಧ ಗ್ರಾಪಂ ಕರ ವಸೂಲಿಗಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕರವಸೂಲಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತೆರಿಗೆ ಸಂಗ್ರಹದ ವೇಳೆ ಶಿಸ್ತು ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದರು.

    ಸರ್ಕಾರಿ ಜಾಗವನ್ನು ಹದ್ದುಬಸ್ತು ಮಾಡಿಸಿಕೊಂಡು, ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ಭೇಟಿ ಪರಿಶೀಲನೆಗಳನ್ನು ಮಾಡುತ್ತಾ ಸರಿಯಾದ ತೆರಿಗೆ ನಿಗದಿಪಡಿಸಿ, ಪ್ರಸ್ತುತ ವರ್ಷದಲ್ಲಿ ಶೇ.100 ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸಲು ಶ್ರಮ ಪಡಬೇಕು ಎಂದರು.

    ಉತ್ತಮವಾಗಿ ತೆರಿಗೆ ಸಂಗ್ರಹಿಸಿದ ಕರ ವಸೂಲಿಗಾರರಿಗೆ ಮಾರ್ಚ್ ಅಂತ್ಯದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸದ ಬಿಲ್ ಕಲೆಕ್ಟರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಲಿಂಗಸುಗೂರು ತಾಲೂಕು ಮುಖ್ಯ ಕಾರ್ಯ ನಿರ್ದೇಶಕ ಮಂಜುನಾಥ ತರಬೇತಿ ನೀಡಿ, ತರಬೇತಿ ವೇಳೆ ಕೇವಲ ಹೇಳುವುದನ್ನಷ್ಟೇ ಕೇಳಿ ಸುಮ್ಮನಾಗುವುದಲ್ಲ. ಕರ ವಸೂಲಿ ಸಂದರ್ಭದಲ್ಲಾಗುವ ಗೊಂದಲಗಳನ್ನು ತರಬೇತಿ ಸಮಯದಲ್ಲಿಯೇ ಪರಿಹರಿಸಿಕೊಳ್ಳಬೇಕು. ಕರವಸೂಲಿ ಕುರಿತು ಯಾವುದೇ ವ್ಯಕ್ತಿ, ಯಾವುದೇ ಪ್ರಶ್ನೆ ಕೇಳಿದರು ಉತ್ತರಿಸುವ ಸಾಮರ್ಥ್ಯ ಎಲ್ಲ ಗ್ರಾಪಂ ಬಿಲ್ ಕಲೆಕ್ಟರ್‌ಗಳಲ್ಲಿಯೂ ಇರಬೇಕು ಎಂದು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಾಪಂ ಇಒ ಅಣ್ಣಾರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts