More

    ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಿ: ಕರ್ನಾಟಕ ರೈತ ಸಂಘ ಒತ್ತಾಯ

    ರಾಯಚೂರು: ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರೈತ ಸಂಘ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿತು.

    ಜಿಲ್ಲೆಯಲ್ಲಿ ಅನಗತ್ಯವಾಗಿ ಭೂ ಮಂಜೂರಾತಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ರಾಜಕೀಯ ಹಿನ್ನೆಲೆ ಹೊಂದಿರುವವರಿಗೆ ಮಾತ್ರ ಭೂ ಮಂಜೂರಾತಿ ನೀಡಲಾಗುತ್ತಿದೆ ಎಂದು ದೂರಿದರು.

    ಲಿಂಗಸುಗೂರು, ದೇವದುರ್ಗ ತಾಲೂಕುಗಳಲ್ಲಿ ನೀರಾವರಿ ಭಾಗದ ಭೂಮಿಗೆ ಭೂಮಿತಿ ಕಾಯ್ದೆ ಅನ್ವಯಿಸಲು ಸರ್ವೇ ಕಾರ್ಯ ನಡೆಸಬೇಕು. ಸಿರವಾರ ತಾಲೂಕಿನ ಕೆ.ಗುಡದಿನ್ನಿ, ಮಾನ್ವಿ ತಾಲೂಕಿನ ಚೀಕಲಪರ್ವಿ, ರಾಜಲಬಂಡಾ, ಕುರ್ಡಿ, ಗೋರ್ಕಲ್, ಸಂಕೇಶ್ವರ ಗ್ರಾಮದಲ್ಲಿ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು.

    ಮಸ್ಕಿ ಮತ್ತು ಸಿಂಧನೂರು ತಾಲೂಕಿನಲ್ಲಿ ಹಳ್ಳಿಗಳಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಹಕ್ಕುಪತ್ರ ನೀಡಬೇಕು. ಫಲವತ್ತಾದ ಕೃಷಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವುದನ್ನು ಕೈಬಿಡುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ್, ಜಿಲ್ಲಾಧ್ಯಕ್ಷ ಅಶೋಕ ನೀಲಗಲ್, ಪದಾಧಿಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ಬಿ.ಎನ್.ಯರಿದಾಳ, ರಮೇಶ ಪಾಟೀಲ್, ಸಂತೋಷ ಹಿರೇದಿನ್ನಿ, ವೀರೇಶ ನಾಯಕ, ನಾಗರಾಜ ಬೊಮ್ಮನಾಳ, ರಸೂಲ್ ಜಾಗೀರದಾರ್, ಕೆ.ಗಿರಿಲಿಂಗಸ್ವಾಮಿ, ಮಾರುತಿ ಜಿನ್ನಾಪುರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts