More

    ಸರ್ಕಾರಿ ನೌಕರರಿಗೆ ಲಸಿಕೆ ನೀಡಿ; ಅಪರ ಜಿಲ್ಲಾಧಿಕಾರಿ ಕೆ.ಎಚ್.ದುರಗೇಶಗೆ ಜಿಲ್ಲಾ ಘಟಕ ಒತ್ತಾಯ

    ರಾಯಚೂರು: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ವರ್ಷ ಮೇಲ್ಪಟ್ಟ ಎಲ್ಲ ಸರ್ಕಾರಿ ನೌಕರರಿಗೆ ಕೋವಿಡ್ ಲಸಿಕೆ ನೀಡಬೇಕು. ಸೋಂಕಿತ ನೌಕರರಿಗೆ ಪ್ರಥಮ ಆದ್ಯತೆಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ಸೌಲಭ್ಯ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.

    ಸಂಘದ ನಿಯೋಗ ಅಪರ ಜಿಲ್ಲಾಧಿಕಾರಿ ಕೆ.ಎಚ್.ದುರಗೇಶಗೆ ಶುಕ್ರವಾರ ಮನವಿ ಸಲ್ಲಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಸೋಂಕಿಗೆ ತುತ್ತಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ನೌಕರರ ಮತ್ತು ಶಿಕ್ಷಕರಿಗೆ ಪ್ರತ್ಯೇಕ ಲಸಿಕಾ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಬಿಡುಗಡೆಗೊಳಿಸಿ ಬೇರೆ ಶಿಕ್ಷಕರನ್ನು ಆ ಕರ್ತವ್ಯಕ್ಕೆ ನಿಯೋಜಿಸಬೇಕು. ರಜೆಯಲ್ಲಿ ಕೋವಿಡ್ ಟ್ರೇಸಿಂಗ್ ಕರ್ತವ್ಯ, ಚೆಕ್‌ಪೋಸ್ಟ್ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡಬೇಕು. ಏಪ್ರಿಲ್ ಮತ್ತು ಮೇ ತಿಂಗಳ ರಜೆ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡಬೇಕು. 50 ವರ್ಷ ದಾಟಿದ ನೌಕರರಿಗೆ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ನಿಯೋಗದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರರೆಡ್ಡಿ, ಶರಣಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts