More

    ಜಿಲ್ಲೆಯಲ್ಲಿ ಕೈಗೆ ಬಲ ನೀಡಿದ ಮತದಾರ, ಕಮಲ ಪಾಳಯದ ನಿರೀಕ್ಷೆ ಹುಸಿ

    ಶಿವಮೂರ್ತಿ ಹಿರೇಮಠ ರಾಯಚೂರು

    ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ತನ್ನ ಬಲ ಹೆಚ್ಚಿಸಿಕೊಂಡರೆ, ಬಿಜೆಪಿ ಎರಡು ಸ್ಥಾನಗಳನ್ನು ಉಳಿಸಿಕೊಂಡಿದೆ. ಆದರೆ, ಜೆಡಿಎಸ್ ಒಂದು ಸ್ಥಾನ ಕುಸಿತ ಕಾಣುವ ಮೂಲಕ ಹಿನ್ನಡೆ ಅನುಭವಿಸಿದೆ.

    ಕನಿಷ್ಠ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿಟ್ಟುಕೊಂಡಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿದ್ದು, ಕಾಂಗ್ರೆಸ್ ನಾಯಕರು ನಾಲ್ಕು ಕ್ಷೇತ್ರಗಳಲ್ಲಿ ಗೆದ್ದು ಬೀಗುವಂತಾಗಿದೆ. ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎರಡು ಕ್ಷೇತ್ರಗಳು ಜೆಡಿಎಸ್‌ಗೆ ಕೈತಪ್ಪಿದರೂ ದೇವದುರ್ಗದಲ್ಲಿ ಗೆಲುವು ಸಾಧಿಸುವ ಮೂಲಕ ಸಮಾಧಾನ ಪಟ್ಟುಕೊಂಡಿದೆ.

    ಇದನ್ನೂ ಓದಿ: ಕುತೂಹಲ ಕೆರಳಿಸಿದೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ: ಸಿಎಂ ಗಾದಿಗಾಗಿ ನಾನಾ ಒತ್ತಡ

    ಕಾಂಗ್ರೆಸ್ ಸೋಲು ಕಂಡ ಮೂರು ಕ್ಷೇತ್ರಗಳ ಪೈಕಿ ರಾಯಚೂರು ನಗರ ಮತ್ತು ಲಿಂಗಸುಗೂರಿನಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದು, ದೇವದುರ್ಗದಲ್ಲಿ ಠೇವಣಿ ಕಳೆದುಕೊಳ್ಳುವಂತಾಗಿದೆ. ಲಿಂಗಸುಗೂರಿನಲ್ಲಿ ಬಂಡಾಯದ ಬಿಸಿಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೆ, ಪಕ್ಷದಲ್ಲಿನ ಭಿನ್ನಮತದ ನಡುವೆಯೂ ಸಿಂಧನೂರಿನಲ್ಲಿ ಜಯಗಳಿಸಿದೆ.

    ಬಿಜೆಪಿ ನಾಯಕರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದ್ದರು. ಆದರೆ ರಾಯಚೂರು ನಗರ ಮತ್ತು ಲಿಂಗಸುಗೂರು ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಗೆಲುವು ಸಾಧಿಸಿದರೆ, ರಾಯಚೂರು ಗ್ರಾಮೀಣ, ಸಿಂಧನೂರು, ಮಸ್ಕಿ, ಮಾನ್ವಿಯಲ್ಲಿ ತೀವ್ರ ಹಿನ್ನಡೆ ಕಂಡಿದೆ.

    ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಉತ್ತಮ ವಾತಾವರಣ ಕಂಡುಬಂದಿದ್ದರಿಂದ ಕಳೆದ ಚುನಾವಣೆಯಲ್ಲಿ ಗಳಿಸಿದ್ದ ಎರಡು ಸ್ಥಾನಗಳ ಜತೆಗೆ ಮತ್ತೊಂದು ಸ್ಥಾನ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಜೆಡಿಎಸ್ ಶಾಸಕರಾಗಿದ್ದ ಮಾನ್ವಿಯ ರಾಜಾ ವೆಂಕಟಪ್ಪ ನಾಯಕ, ಸಿಂಧನೂರಿನ ವೆಂಕಟರಾವ್ ನಾಡಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಅಲ್ಪಮತ ಗಳಿಸುವ ಮೂಲಕ ಜೆಡಿಎಸ್ ಹಿನ್ನಡೆ ಅನುಭವಿಸಿದೆ.

    ನೋಂದಾಯಿತ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಪಡೆದಿರುವ ಮತಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದು, ಲಿಂಗಸುಗೂರು ಕ್ಷೇತ್ರದಲ್ಲಿ ಕೆಆರ್‌ಪಿಪಿಯ ಆರ್.ರುದ್ರಯ್ಯ 13,639 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದು ಟಿಕೆಟ್ ನೀಡದ ಕಾಂಗ್ರೆಸ್ ಸೋಲಿಗೆ ಕಾರಣವಾಗುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

    ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ, ಸಿಂಧನೂರಿನ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮಾಂತರದ ಬಸನಗೌಡ ತುರ್ವಿಹಾಳ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಆದರೆ ರಾಯಚೂರು ನಗರ, ಲಿಂಗಸುಗೂರು, ಮಾನ್ವಿ, ಮಸ್ಕಿಯಲ್ಲಿ ಮುನ್ನಡೆ ಒಂದೊಂದು ರೌಂಡ್‌ನಲ್ಲೂ ಬದಲಾವಣೆಯಾಗುತ್ತಿದ್ದರಿಂದ ಅಭ್ಯರ್ಥಿಗಳು, ಕಾರ್ಯಕರ್ತರಲ್ಲಿ ಆತಂಕ ಮೂಡಿಸಿತ್ತು.

    ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದರೂ ಹಲವು ಕ್ಷೇತ್ರಗಳಲ್ಲಿ ಮತದಾರರು ಗೆಲುವಿನ ಅಂತರ ಕಡಿಮೆ ಮಾಡುವ ಮೂಲಕ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿರುವುದು ಕಂಡು ಬಂದಿದೆ. ಅಭಿವೃದ್ಧಿ, ಪಕ್ಷಕ್ಕಿಂತ ಜನರೊಂದಿಗೆ ಹೊಂದಿರುವ ಬಾಂಧವ್ಯ, ನಡವಳಿಕೆ ಗೆಲುವಿಗೆ ಮುಖ್ಯ ಎನ್ನುವುದನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ತೋರಿಸಿಕೊಟ್ಟಿದ್ದಾರೆ.

    ನಡೆಯದ ಮೋದಿ ಮ್ಯಾಜಿಕ್

    ಜಿಲ್ಲೆಯ ಸಿಂಧನೂರು ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೂ ಅಭ್ಯರ್ಥಿಗಳಿಗೆ ಅನುಕೂಲವಾಗಿಲ್ಲ. ಸಿಂಧನೂರಿನ ಬಿಜೆಪಿ ಅಭ್ಯರ್ಥಿ ಕೆ.ಕರಿಯಪ್ಪ ಮತ ಗಳಿಕೆ ಹೆಚ್ಚಳವಾದರೂ ಗೆಲುವು ಸಾಧಿಸಲಾಗಿಲ್ಲ. ಪಕ್ಕದ ಮಸ್ಕಿ ಕ್ಷೇತ್ರದಲ್ಲಿಯೂ ಬಿಜೆಪಿ ಪರಾಭವಗೊಂಡಿರುವುದು ಹಾಗೂ ಗೆಲುವು ಸಾಧಿಸಿರುವ ಎರಡು ಕ್ಷೇತ್ರಗಳಲ್ಲಿಯೂ ಮೋದಿಗಿಂತ ಇತರ ವಿಚಾರಗಳು ಕಾರಣವಾಗಿದ್ದು, ಮೋದಿ ಪ್ರಭಾವ ನಡೆದಿಲ್ಲ ಎಂದು ಹೇಳಬಹುದಾಗಿದೆ.

    ಪ್ರಭಾವ ಬೀರದ ಮೀಸಲಾತಿ ಅಸ್ತ್ರ

    ಚುನಾವಣೆ ಹೊಸ್ತಿಲಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಮತ್ತು ಎಸ್ಸಿ ಮೀಸಲಾತಿ ವರ್ಗೀಕರಣಕ್ಕೆ ಶಿಫಾರಸು ಮಾಡುವ ಮೂಲಕ ಎಸ್ಸಿ, ಎಸ್ಟಿ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದ ಬಿಜೆಪಿಯ ಅಸ್ತ್ರಕ್ಕೆ ಜಿಲ್ಲೆಯಲ್ಲಿ ನಿರೀಕ್ಷಿತ ಫಲ ದೊರೆತಿಲ್ಲ. ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಗೆಲುವು ಸಾಧಿಸಿದ ರಾಯಚೂರು ನಗರ ಮತ್ತು ಲಿಂಗಸುಗೂರು ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಮತಗಳು ನಿರೀಕ್ಷೆಯಂತೆ ಬಂದಿಲ್ಲ ಎನ್ನುವುದು ಎದ್ದು ಕಂಡು ಬರುತ್ತಿದೆ.

    ನಿಧಾನಗತಿ ಎಣಿಕೆ

    ಜಿಲ್ಲೆಯ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಿಧಾನಗತಿಯಲ್ಲಿ ನಡೆಯಿತು. ಮಧ್ಯಾಹ್ನ ಮೂರು ಗಂಟೆಯವರೆಗೂ ಸಾಗಿತ್ತು. ಮಾಧ್ಯಮಗಳಿಗೆ ಸಮರ್ಪಕ ಮಾಹಿತಿ ನೀಡುವಲ್ಲೂ ಜಿಲ್ಲಾಡಳಿತ ವಿಫಲವಾಯಿತು. ರಾಯಚೂರು ಗ್ರಾಮೀಣ ಕ್ಷೇತ್ರದ 3ನೇ ಸುತ್ತಿನ ಮತ ಎಣಿಕೆ ಕಾರ್ಯ ನಡೆಯುವಾಗ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತಗಳು ತೋರಿಸದಿದ್ದಾಗ ಕೆಲ ಕಾಲ ಎಣಿಕೆ ಕಾರ್ಯ ಸ್ಥಗಿತಗೊಳ್ಳುವಂತಾಗಿತ್ತು. ತಾಂತ್ರಿಕ ಸಿಬ್ಬಂದಿ ದೋಷ ಸರಿಪಡಿಸಿದ ನಂತರ ಎಣಿಕೆ ಕಾರ್ಯ ಮುಂದುವರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts