More

    ಅಂಗವಿಕಲರಿಗೆ ಪೂರ್ಣ ಪ್ರಮಾಣದ ಸೌಲಭ್ಯ ನೀಡಿ : ಅಧಿಕಾರಿಗಳಿಗೆ ಡಿಸಿ ಚಂದ್ರಶೇಖರ ನಾಯಕ ಸೂಚನೆ

    ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು ಹಾಗೂ ನೈಜತೆಯಿಂದ ಅಂಗವಿಕಲರ ಸರ್ವೇ ಮಾಡಿ ಎಲ್ಲ ಅರ್ಹರಿಗೂ ಗುರುತಿನ ಚೀಟಿ ನೀಡುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ವಿಕಲಚೇತನರ ಹಕ್ಕುಗಳು ಹಾಗೂ ಸೌಲಭ್ಯಗಳ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 26,825 ಅಂಗವಿಕಲರಿದ್ದು, ಎಲ್ಲರಿಗೂ ಗುರುತಿನ ಚೀಟಿ ಒದಗಿಸಬೇಕೆಂದರು.

    ಎಲ್ಲ ಗ್ರಾಮಗಳಲ್ಲಿ ಅಲ್ಲಿನ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಕಲಾಂಗರ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಬೇಕು. 21 ಪ್ರಕಾರದ ವಿಕಲತೆಗೆ ಸಂಬಂಧಿಸಿ ತಜ್ಞರ ತಂಡ ಪ್ರತಿ ಗ್ರಾಮಗಳಿಗೆ ಭೇಟಿ ನೀಡಬೇಕು. ಗ್ರಾಮಗಳಲ್ಲಿರುವ ವಿಕಲಚೇತನರಿಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಚಿಕಿತ್ಸೆ ನೀಡಬೇಕು. ರಾಯಚುರು ತಾಲೂಕು ವ್ಯಾಪ್ತಿಯಲ್ಲಿರುವ ಅಂಗವಿಕಲರನ್ನು ನಗರದ ರಿಮ್ಸ್ ಆಸ್ಪತ್ರೆಗೆ ಕರೆಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ವಿಕಲಚೇತನರ ಭವನ ಸ್ಥಾಪಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಂಡು, ಈಗಿರುವ ನಗರ ವಿಕಲಚೇತನರ ಭವನವನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗೆ ಸೂಚಿಸಿದರು. ನ್ಯಾ.ದಯಾನಂದ, ಎಸ್ಪಿ ಬಿ.ನಿಖಿಲ್, ಡಿಎಚ್‌ಒ ಡಾ.ಸುರೇಂದ್ರ ಬಾಬು, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಮಾನಸಿಕ ತಜ್ಞ ಡಾ.ಅನಿಲ್ ಗುಮಾಸ್ತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts