More

    ಪರೀಕ್ಷೆ ಬಹಿಷ್ಕರಿಸಿದರೂ ಸ್ಪಂದಿಸದ ಸರ್ಕಾರ

    ರಾಯಚೂರು: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆ ಭರ್ತಿಯಲ್ಲಿ ಕೃಷಿ ತಾಂತ್ರಿಕ ಪದವೀಧರರಿಗೆ ಶೇ.15 ಮೀಸಲಿಡುವಂತೆ ಒತ್ತಾಯಿಸಿ ಕಳೆದ 24 ದಿನಗಳಿಂದ ವಿವಿಧ ಹಂತದ ಹೋರಾಟ ನಡೆಸಿದರೂ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಇದರಿಂದಾಗಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಂತೇಶ ಗಾಣಿಗ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ತರಗತಿ ಮತ್ತು ಪರೀಕ್ಷೆಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುವುದರ ಜತೆಗೆ ಸರ್ಕಾರ, ಕೃಷಿ ಸಚಿವಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮಕೈಗೊಳ್ಳಲಾಗಿಲ್ಲ. ದೇಶದ 9 ರಾಜ್ಯಗಳಲ್ಲಿ ಕೃಷಿ ಇಲಾಖೆ ಹುದ್ದೆಗಳ ಭರ್ತಿಯಲ್ಲಿ ಬಿಎಸ್ಸಿ ಕೃಷಿ ಹಾಗೂ ಬಿ.ಟೆಕ್ ಕೃಷಿ ತಾಂತ್ರಿಕ ಪದವೀಧರರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ 2016ಕ್ಕೂ ಮುಂಚೆ ಸಮಾನ ಅವಕಾಶ ನೀಡಲಾಗಿತ್ತು. ಆದರೆ, 2016ರ ನಂತರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಲವು ಹೋರಾಟಗಳ ನಂತರ ಕೃಷಿ ತಾಂತ್ರಿಕ ಪದವೀಧರರಿಗೆ ಶೇ.15 ಮೀಸಲಾತಿ ನೀಡಲಾಗಿದೆ. ಆದರೆ, ಅದೇ ವಿಭಾಗದಲ್ಲಿ ಆಹಾರ ತಂತ್ರಜ್ಞಾನ, ಆಹಾರ ವಿಜ್ಞಾನ, ಕೃಷಿ ಮಾರುಕಟ್ಟೆ, ಸಹಕಾರ, ಜೈವಿಕ ತಂತ್ರಜ್ಞಾನ ಪದವೀಧರರನ್ನು ಸೇರ್ಪಡೆ ಮಾಡಿರುವುದರಿಂದ ಕೃಷಿ ತಾಂತ್ರಿಕ ಪದವೀಧರರಿಗೆ ಅನ್ಯಾಯವಾಗುತ್ತಿದೆ.

    ಪ್ರಸ್ತುತ ಕೃಷಿ ಇಲಾಖೆಯಿಂದ ನಡೆಸಲಾಗುತ್ತಿರುವ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕ ಅಧಿಕಾರಿ ಹುದ್ದೆಗಳ ಭರ್ತಿಯಲ್ಲಿ ಕೃಷಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಶೇ.15 ಮೀಸಲಾತಿ ನಿಗದಿಪಡಿಸಬೇಕು. ಇತರರನ್ನು ಅದರಲ್ಲಿ ಸೇರ್ಪಡೆ ಮಾಡಬಾರದು. ಕೃಷಿಯಲ್ಲಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆ ಅತ್ಯವಶ್ಯವಾಗಿದೆ. ದೇಶದ 15 ರಾಜ್ಯಗಳಲ್ಲಿ ನಿರ್ದೇಶನಾಲಯಗಳಿದ್ದು, ರಾಜ್ಯದಲ್ಲಿಯೂ ನಿರ್ದೇಶನಾಲಯ ಸ್ಥಾಪನೆ ಮಾಡಬೇಕು ಎಂದು ಮಹಾಂತೇಶ ಗಾಣಿಗ ಒತ್ತಾಯಿಸಿದರು. ಪದಾಧಿಕಾರಿಗಳಾದ ಪೂಜಾ, ಶಶಿಕಲಾ, ಅಶ್ವಿನಿ, ಸತೀಶ, ಅಮರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts