More

    ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ಸಮಾವೇಶ, ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

    ರಾಯಚೂರು: ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆ.15ರಂದು ಸಮಾವೇಶ ಆಯೋಜಿಸಲಾಗಿದ್ದು, ಸುಮಾರು ಎರಡು ಲಕ್ಷ ಕಾರ್ಯಕರ್ತರು ಸೇರಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

    ಕಾರ್ಯಕ್ರಮಕ್ಕೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಆಹ್ವಾನಿಸಲಾಗಿದ್ದು, ಅವರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾವೇಶಕ್ಕೆ ರಾಜ್ಯದ ಪ್ರತಿ ತಾಲೂಕಿನಿಂದ ಕನಿಷ್ಠ 10 ಸಾವಿರ ಕಾರ್ಯಕರ್ತರನ್ನು ಕರೆದುಕೊಂಡು ಬರುವಂತೆ ತಿಳಿಸಲಾಗಿದ್ದು, ಬೆಂಗಳೂರಿಗೆ ಹತ್ತಿರದಲ್ಲಿರುವ ಜಿಲ್ಲೆಗಳಿಂದ ತಲಾ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬರಲಿದ್ದಾರೆ. ರೈಲು ನಿಲ್ದಾಣ ಹತ್ತಿರದ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜುವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ರಾಯಚೂರು ಜಿಲ್ಲೆಯಲ್ಲಿ 1.70 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 100 ಸದಸ್ಯರಿದ್ದಾರೆ. ಪಂಚಾಯಿತಿ ಮಟ್ಟದಲ್ಲಿಯೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿದ್ದು ದಾಖಲೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನಡುವೆ ಸರಿಯಿಲ್ಲ ಎಂದು ಅಪಪ್ರಚಾರ ಮಾಡಿದವರಿಗೆ ಸೇರಿದ್ದ ಕಾರ್ಯಕರ್ತರೇ ಉತ್ತರ ನೀಡಿದ್ದಾರೆ.

    ಬೆಲೆ ಏರಿಕೆ ಮುಂತಾದವುಗಳಿಂದ ಜನರು ರೋಸಿ ಹೋಗಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳಲು ನೈತಿಕತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪರನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡಬೇಕಾಗಿತ್ತು. ಆದರೆ ಅವರು ಕಣ್ಣೀರು ಹಾಕಿ ಸಿಎಂ ಸ್ಥಾನ ಬಿಡುವಂತೆ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.

    ಶಾಸಕ ಬಸನಗೌಡ ದದ್ದಲ್, ಮಾಜಿ ಸಂಸದ ಬಿ.ವಿ.ನಾಯಕ, ಪ್ರಮುಖರಾದ ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಜಿ.ಬಸವರಾಜರೆಡ್ಡಿ, ಅಸ್ಲಾಂ ಪಾಷಾ, ನರಸಿಂಹಲು ಮಾಡಗಿರಿ, ಭೀಮನಗೌಡ ನಾಗಡದಿನ್ನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts