More

    ರಾಯಚೂರು ಬಂದ್ ನೀರಸ, ಪ್ರತಿಭಟನೆಗೆ ಸೀಮಿತ

    ರಾಯಚೂರು: ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ ಖಂಡಿಸಿ ಹಾಗೂ ಕಲುಷಿತ ನೀರು ಪೂರೈಕೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಟಿಜನ್ ಫೋರಂ ಕರೆ ನೀಡಿದ್ದ ರಾಯಚೂರು ನಗರ ಬಂದ್‌ಗೆ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ವ್ಯಾಪಾರ, ವಹಿವಾಟು ಸ್ಥಗಿತವಾಗಿತ್ತು. ಬಸ್‌ಗಳ ಸಂಚಾರ ಸಹಜವಾಗಿತ್ತು. ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ನಗರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ನಗರಸಭೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಪೊಲೀಸರು ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನರು ಸುತ್ತುವರಿದು ಸಂಚರಿಸುವಂತಾಯಿತು.

    ಕೆಲವು ದಿನಗಳಿಂದ ನಗರದಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಾಂತಿ, ಬೇಧಿ ಉಲ್ಭಣವಾಗಿದ್ದು, ನೂರಾರು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತಾಗಿದೆ. ಮೂವರು ಮೃತಪಟ್ಟಿದ್ದಾರೆ. ಆದರೂ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದರೂ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ನಗರಸಭೆ ಸದಸ್ಯರಾದ ಜಯಣ್ಣ, ಸಾಜೀದ್ ಸಮೀರ್, ಬಿ.ರಮೇಶ, ಪ್ರಮುಖರಾದ ರವಿ ಬೋಸರಾಜು, ಎಂ.ವಿರೂಪಾಕ್ಷಿ, ಬಷಿರುದ್ದೀನ್, ಡಾ.ರಜಾಕ್ ಉಸ್ತಾದ್, ಜಿ.ಅಮರೇಶ, ಎಸ್.ಮಾರೆಪ್ಪ, ಖಾಜಾ ಅಸ್ಲಂ, ಬಸವರಾಜ ಕಳಸ, ಅಕ್ಬರ್‌ಹುಸೇನ್ ನಾಗುಂಡಿ, ಶಿವಕುಮಾರ ಯಾದವ, ಅಸ್ಲಂ ಪಾಷಾ, ಅಬ್ದುಲ್ ಕರೀಂ, ರಾಮನಗೌಡ, ಯುಸೂಫ್ ಖಾನ್, ಕೆ.ಇ.ಕುಮಾರ, ಶಂಶುದ್ದೀನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts