More

    ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ರಿಮ್ಸ್ ವೈದ್ಯರ ಒತ್ತಾಯ

    ರಾಯಚೂರು: ಕರ್ತವ್ಯ ನಿರತ ತರಬೇತಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಮೃತ ರೋಗಿಯ ಸಂಬಂಧಿಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿ ಸ್ಥಳೀಯ ರಿಮ್ಸ್ ಆಸ್ಪತ್ರೆ ಮುಂದೆ ತರಬೇತಿ ವೈದ್ಯರು ಕೆಲಸ ಸ್ಥಗಿತಗೊಳಿಸಿ ಶನಿವಾರ ಪ್ರತಿಭಟನೆ ನಡೆಸಿದರು.

    ಅನಾರೋಗ್ಯದಿಂದ ಬಳಲುತ್ತಿದ್ದ ನರಸಿಂಹಲು ಎಂಬಾತನನ್ನು ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ರೋಗಿ ಸಾವಿಗೆ ವೈದ್ಯರ ನಿರ್ಲಕ್ಷೃ ಕಾರಣ ಎಂದು ಮೃತನ ಸಂಬಂಧಿಕರು ಚಿಕಿತ್ಸೆ ನೀಡಿದ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.

    ಇದರಿಂದಾಗಿ ಶನಿವಾರ ಬೆಳಗ್ಗೆ ವೈದ್ಯರು ಕೆಲಸ ಸ್ಥಗಿತಗೊಳಿಸಿ, ಆಸ್ಪತ್ರೆ ಮುಂಭಾಗದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು, ಕರ್ತವ್ಯ ನಿರತ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

    ವೈದ್ಯರು ಶಕ್ತಿ ಮೀರಿ ರೋಗಿಗಳ ಪ್ರಾಣ ಉಳಿಸಲು ಪ್ರಯತ್ನಿಸುತ್ತಿದ್ದು, ಕೋವಿಡ್‌ನಂತಹ ಸಂದರ್ಭದಲ್ಲಿ ಪ್ರಾಣ ಭಯ ತೊರೆದು ಕೆಲಸ ಮಾಡುತ್ತಿದ್ದರೂ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ವೈದ್ಯರು ಆತ್ಮಸ್ಥೈರ್ಯ ಕಳೆದುಕೊಳ್ಳುವಂತಾಗಿದೆ ಎಂದು ವೈದ್ಯರು ದೂರಿದರು.

    ಸ್ಥಳಕ್ಕೆ ಆಗಮಿಸಿದ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ವೈದ್ಯರ ಮನವೊಲಿಸುವ ಪ್ರಯತ್ನ ನಡೆಸಿದರೂ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ವೈದ್ಯರು ಹಠ ಹಿಡಿದು ಕುಳಿತರು. ನಂತರ ದೂರು ದಾಖಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

    ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ವಿಜಯಶಂಕರ, ರಿಮ್ಸ್ ಅಧೀಕ್ಷಕ ಕೆ.ಭಾಸ್ಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts