More

    ಮಹಿಳೆಯರ ಸಂಘಟನೆಗೆ ಒತ್ತು; ಬಿ.ಎಸ್.ಅರುಣಾದೇವಿ ಹೇಳಿಕೆ


    ವೀರಶೈವ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನ

    ರಾಯಚೂರು: ರಾಜ್ಯದಲ್ಲಿ ವೀರಶೈವ ಸಮುದಾಯದ ಮಹಿಳೆಯರನ್ನು ಸಂಘಟಿಸುವ ಮೂಲಕ, ಅವರನ್ನು ಸಮಾಜದ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಸ್.ಅರುಣಾದೇವಿ ತಿಳಿಸಿದರು.

    ಸ್ಥಳಿಯ ಬಸವ ಕೇಂದ್ರದಲ್ಲಿ ವೀರಶೈವ ಮಹಾಸಭಾದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮಹಿಳಾ ಜಿಲ್ಲಾ ಘಟಕದ ರಚನೆ ಕುರಿತು ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರನ್ನು ಗುರುತಿಸಿ ಮಹಿಳಾ ಘಟಕ ರಚನೆ ಮಾಡಲಾಗುವುದು. ಎಲ್ಲರೂ ಒಗ್ಗೂಡಿ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಸಮುದಾಯದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಸಕ್ರಿಯವಾಗಿರುವವರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಜವಾಬ್ದಾರಿಯನ್ನೂ ನೀಡಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಸಮುದಾಯದ ಸದಸ್ಯತ್ವ ಹೆಚ್ಚಳ ಮಾಡಿದರೆ ಸಾಲದು, ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಿದಾಗ ಘಟಕ ರಚನೆ ಸಾರ್ಥವಾಗುತ್ತದೆ. ಜಿಲ್ಲೆಯಲ್ಲಿ ವೀರಶೈವ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದರೂ, ಸದಸ್ಯತ್ವ ಪಡೆದವರ ಸಂಖ್ಯೆ ಕಡಿಮೆಯಿದೆ. ಮಹಿಳೆಯರು ಸದಸ್ಯರಾಗುವುದರ ಜತೆಗೆ ಹೆಚ್ಚಿನ ಜನರು ಸದಸ್ಯರಾಗುವಂತೆ ಮಾಡಬೇಕು. ಸಮುದಾಯದ ಸಂಘಟನೆ ಬಗ್ಗೆ ಜಾಗೃತಿ, ತಿಳಿವಳಿಕೆ ಮೂಡಿಸುವ ಮೂಲಕ ಸದಸ್ಯತ್ವ ಅಭಿಯಾನ ವೇಗವಾಗಿ ನಡೆಯುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.

    ಶಾಸಕ ಡಾ.ಶಿವರಾಜ ಪಾಟೀಲ್, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಪದಾಧಿಕಾರಿಗಳಾದ ಶರಣಬಸವ, ಭೀಮರೆಡ್ಡಿ ಕಲ್ಲೂರು, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts