More

    ವಿದ್ಯಾರ್ಥಿನಿ ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸಿ

    ಕಡೂರು: ಮಹಿಳೆಗೆ ಪೂಜನೀಯ ಸ್ಥಾನ ನೀಡಿರುವ ಭಾರತದಲ್ಲಿ ಹೆಣ್ಣು ಮಗಳನ್ನು ಹಾಡಹಗಲೇ ಹತ್ಯೆ ಮಾಡಿದ ಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
    ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ್ ಅವರಿಗೆ ಪಟ್ಟಣದ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
    ಆರೋಪಿ ಕ್ರೂರವಾಗಿ ಹತ್ಯೆ ಮಾಡಿರುವ ವಿಡಿಯೋ ಮತ್ತು ಎಲ್ಲ ಸಾಕ್ಷಿಗಳಿದ್ದರೂ ರಾಜ್ಯ ಸರ್ಕಾರ ಆತನನ್ನು ರಕ್ಷಿಸುತ್ತಿದೆ. ಮಾನವೀಯತೆಯೇ ಇಲ್ಲದ ಸರ್ಕಾರವಿದು. ಹತ್ಯೆಯಾದ ವಿದ್ಯಾರ್ಥಿನಿ ಕುರಿತು ಮುಖ್ಯಮಂತ್ರಿ, ಗೃಹಸಚಿವರು ಕೇವಲವಾಗಿ ಮಾತನಾಡುವುದು ಖಂಡನೀಯ ಎಂದರು.
    ಆತನಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು. ಆಗ ಮಾತ್ರ ನೇಹಾ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಇಂಥ ಆರೋಪಿಯನ್ನು ಸಾರ್ವಜನಿಕರ ಮುಂದೆ ತಂದು ಬಿಟ್ಟರೆ ನ್ಯಾಯ ನೀಡಿದಂತಾಗುತ್ತದೆ. ಪೊಲೀಸರಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲವಾದರೆ ಹೆಣ್ಣುಮಕ್ಕಳ ಪರಿಸ್ಥಿತಿ ಏನು ಎಂದು ಸರ್ಕಾರವನ್ನು ಪ್ರಶ್ನಿಸಬೇಕಾಗುತ್ತದೆ. ಹುಬ್ಬಳ್ಳಿ ಘಟನೆಯನ್ನು ಪೀಠವು ಗಂಭೀರವಾಗಿ ಖಂಡಿಸುತ್ತದೆ. ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸಮಾಜದೊಂದಿಗೆ ನಾವು ಇದ್ದೇವೆ ಎಂದರು.
    ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಮಾತನಾಡಿ, ಈ ರೀತಿಯ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಈ ರೀತಿಯ ಕೃತ್ಯಕ್ಕೆ ಮುಂದಾಗುವವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಹೆಣ್ಣುಮಕ್ಕಳ ಸುರಕ್ಷತೆಗೆ ತುರ್ತಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ತಾಲೂಕು ಘಟಕದಿಂದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಡಗನಾಡು ರೆಡ್ಡಿ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಂ.ರೇವಣಸಿದ್ದಪ್ಪ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಟಿ.ಆರ್.ರೇಣುಕಪ್ಪ, ಜಂಗಮ ಸಮಾಜದ ಅಧ್ಯಕ್ಷ ಎಂ.ಎಚ್.ಪ್ರಕಾಶ್‌ಮೂರ್ತಿ, ಜಿ.ಎಂ.ಯತೀಶ್, ಓಂಕಾರಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts