More

    ಅಗ್ರಿಕಲ್ಚರ್ ಸೈನ್ಸ್ ವಿವಿಯಲ್ಲಿ ಕೃಷಿ ಮೇಳ- ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿಕೆ

    ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಜ.10ರಿಂದ 12ರವರೆಗೆ ಮೂರು ದಿನಗಳ ಕಾಲ ಸಿರಿಧಾನ್ಯಗಳ ಸಾರ ಜೀವನಕ್ಕೆ ಆಧಾರ ಘೋಷ ವಾಕ್ಯದಡಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.

    ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ಅವಿಷ್ಕಾರಗಳ ಕುರಿತು ರೈತರಿಗೆ ಮಾಹಿತಿ ನೀಡುವುದರ ಜತೆಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿ ಹೇಳಿದರು.

    ಈ ಭಾಗದ ಮುಖ್ಯ ಕೃಷಿ ಬೆಳೆಗಳ ಉತ್ಪಾದನಾ ತಾಂತ್ರಿಕತೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಗಳ ಸಮೀಕರಣ, ಫಲಪುಷ್ಪ ಪ್ರದರ್ಶನ, ರೇಷ್ಮೆ ಕೃಷಿ, ಕುರಿ ಮತ್ತು ಮೇಕೆ ಸಾಕಣೆ, ಎರೆಹುಳು ಗೊಬ್ಬರ ಉತ್ಪಾದನೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮೇಳದಲ್ಲಿ ಒದಗಿಸಲಾಗುತ್ತಿದೆ ಎಂದರು.

    ಕಲ್ಯಾಣ ಕರ್ನಾಟಕ ಭಾಗದ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ಗೋಡಂಬಿ ಬೆಳೆಯನ್ನು ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ಪ್ರತಿಯೊಬ್ಬ ರೈತನೂ ಸಮಗ್ರ ಕೃಷಿ ಪರಿಕಲ್ಪನೆಯನ್ನು ಮೂಡಿಸಿಕೊಂಡು ಮುಂದೆ ಅಳವಡಿಸಿಕೊಂಡು ಸಮಗ್ರ ಅಭಿವೃದ್ಧಿ ಹೊಂದಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

    ಜ.10ರಂದು ಬೆಳಗ್ಗೆ ಗೋಪೂಜೆ ಸಲ್ಲಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಲಾಗುತ್ತಿದ್ದು, 11ರ ಬೆಳಗ್ಗೆ 11ಕ್ಕೆ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ಮೇಳವನ್ನು ಉದ್ಘಾಟಿಸಲಿದ್ದು, ಸಚಿವರಾದ ಬಿ.ಶ್ರೀರಾಮುಲು, ಮುನಿರತ್ನ, ಪ್ರಭು ಚವ್ಹಾಣ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ, ಎಸ್.ಅಂಗಾರ, ಶಂಕರ ಪಾಟೀಲ್ ಮುನೇಕೊಪ್ಪ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

    ವಿಸ್ತರಣಾ ನಿರ್ದೇಶಕ ಡಾ.ಎಂ.ಕೆ.ನಾಯಕ ಮಾತನಾಡಿ, ಮೇಳದಲ್ಲಿ ವಿವಿ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಜಿಲ್ಲೆಗೊಬ್ಬರಂತೆ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 220 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, 3 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

    ವಿವಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದರಲ್ಲೂ ಸಿರಿಧಾನ್ಯಕ್ಕೆ ಆದ್ಯತೆ ನೀಡಲಾಗಿದೆ. ಹಗರಿ ಸಂಶೋಧನಾ ಕೇಂದ್ರದಿಂದ ಕೊರಲೆ, ಸಾಮೆ, ರಾಗಿ, ಕೊರಗು, ಜೋಳದ ಹೊಸ ತಳಿಗಳನ್ನು ಸಂಶೋಧನೆ ಮಾಡಿ ಬಿಡುಗಡೆ ಮಾಡಲಾಗಿದೆ. ಜತೆಗೆ ವಾಣಿಜ್ಯೀಕರಣ ಮಾಡಲಾಗುತ್ತಿದೆ.
    | ಡಾ.ಬಿ.ಕೆ.ದೇಸಾಯಿ, ವಿವಿ ಸಂಶೋಧನಾ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts