More

    ಪ್ರಧಾನಿ ಮೋದಿಯನ್ನು ಅಪಶಕುನ ಎಂದು ನಿಂದಿಸಿದ ರಾಹುಲ್​ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು “ಪನೌತಿ (ಅಪಶಕುನ)” ಎಂದು ನಿಂದಿಸಿರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ (ನ.23) ನೋಟಿಸ್ ನೀಡಿದ್ದು, ಬಿಜೆಪಿ ಸಲ್ಲಿಸಿರುವ ದೂರಿಗೆ ವಿವರಣೆ ನೀಡುವಂತೆ ಕೋರಿದೆ.

    ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್​ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಲ್ಲದೆ, ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.

    ಬಿಜೆಪಿ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿಗೆ ನೋಟಿಸ್​ ಹೊರಡಿಸಿರುವ ಆಯೋಗ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ನಿಮ್ಮ ವಿರುದ್ಧ ಕ್ರಮ ಯಾಕೆ ಜರುಗಿಸಬಾರದು ಎಂಬುದಕ್ಕೆ ಶುಕ್ರವಾರ (ನ.24) ಸಂಜೆ 6 ಗಂಟೆಯೊಳಗೆ ಉತ್ತರ ನೀಡುವಂತೆ ತಾಕೀತು ಮಾಡಿದೆ.

    ಅಂದಹಾಗೆ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಆಧಾರವಿಲ್ಲದೆ ಯಾವುದೇ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಆರೋಪ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಮತ್ತು ಆಯೋಗ ಕ್ರಮ ಜರುಗಿಸುತ್ತದೆ.

    ಏನಿದು ವಿವಾದ?
    ಕಳೆದ ಮಂಗಳವಾರ ರಾಜಸ್ಥಾನದಲ್ಲಿ ಚುನಾವಣ ಪ್ರಚಾರ ನಿಮಿತ್ತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಚುನಾವಣೆಯ ಸಮಯದಲ್ಲಿ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ. ಟಿವಿಯಲ್ಲಿ ಬಂದರೆ, ಹಿಂದು-ಮುಸ್ಲಿಂ ಎಂದು ಹೇಳುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಪಂದ್ಯ ನೋಡಲು ಹೋಗುತ್ತಾರೆ. ನಮ್ಮ ಹುಡುಗರು ಕ್ರಿಕೆಟ್​ ಪಂದ್ಯವನ್ನು ಗೆಲ್ಲುತ್ತಿದ್ದರು ಆದರೆ, ಪನೌತಿ (ಅಪಶಕುನ) ಕಾಲಿಟ್ಟಿದ್ದರಿಂದ ಪಂದ್ಯವನ್ನು ಸೋತರು ಎಂದು ನ.19ರಂದು ನಡೆದ ವಿಶ್ವಕಪ್​ ಫೈನಲ್​ ಪಂದ್ಯವನ್ನು ಉಲ್ಲೇಖಿಸಿ ರಾಹುಲ್​ ಗಾಂಧಿ ಮಾತನಾಡಿದ್ದರು.

    ರಾಹುಲ್​ ಗಾಂಧಿ ಕಾಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅದು ಬಿಜೆಪಿ ಗಮನಕ್ಕೆ ಬಂದಿದ್ದು, ಕ್ಷಮೆ ಕೋರಲು ಪಟ್ಟು ಹಿಡಿದಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ರಾಹುಲ್​ ಹೇಳಿಕೆ, “ನಾಚಿಕೆಗೇಡಿನ, ಖಂಡನೀಯ ಮತ್ತು ಅವಮಾನಕರ” ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

    90 ನಿಮಿಷ ಹಾರರ್ ಸಿನಿಮಾ ನೋಡಿದ್ರೆ ತೂಕ ಇಳಿಕೆಯಾಗುತ್ತದೆ; ಅಧ್ಯಯನ

    ಮಂಜಿನ ಕಾರಣ ಡಿ.1ರಿಂದ ಎರಡು ತಿಂಗಳ ಕಾಲ 62 ರೈಲುಗಳು ರದ್ದು ; ಇಲ್ಲಿದೆ ನೋಡಿ ಪಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts