More

    ಮಂಗಳೂರಲ್ಲಿ ಮರುಕಳಿಸಿದ ರ‌್ಯಾಗಿಂಗ್, ಎರಡು ಕಾಲೇಜುಗಳ 7 ವಿದ್ಯಾರ್ಥಿಗಳ ಬಂಧಿಸಿದ ಪೊಲೀಸರು

    ಮಂಗಳೂರು: ನಗರ ಪೊಲೀಸ್ ಆಯುಕ್ತರ ಖಡಕ್ ಸೂಚನೆ ನಡುವೆಯೂ ಮತ್ತೆ ಎರಡು ಕಾಲೇಜುಗಳಲ್ಲಿ ರ‌್ಯಾಗಿಂಗ್ ನಡೆದಿದೆ. ಒಂದು ಪ್ರಕರಣದಲ್ಲಿ ವಿಚಾರಣೆ ನಡೆಸಿದ ಉಪನ್ಯಾಸಕರ ಮೇಲೆ ಹಲ್ಲೆ ನಡೆದಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಲ್ಮಠದಲ್ಲಿರುವ ಪದವಿ ಕಾಲೇಜಿನ 9 ವಿದ್ಯಾರ್ಥಿಗಳನ್ನು ರ‌್ಯಾಗಿಂಗ್ ನಡೆಸಿದ ಅದೇ ಕಾಲೇಜಿನ ವಿದ್ಯಾರ್ಥಿಗಳಾದ, ಹಾಸ್ಟೆಲ್‌ನಲ್ಲಿ ವಾಸ್ತವ್ಯವಿರುವ ಕೇರಳ ಮೂಲದ ಮುಹಮ್ಮದ್ ಅದೀಲ್(20), ರಿಜಿನ್ ರಿಯಾಸ್(20) ಮತ್ತು ಮುಹಮ್ಮದ್ ನಿಜಾಮುದ್ದೀನ್ ಬಿ.ಪಿ.(20) ಎಂಬುವರನ್ನು ಬಂಧಿಸಲಾಗಿದೆ.

    ಆರೋಪಿಗಳು ಪಂಪ್‌ವೆಲ್‌ನ ಸೈಮನ್‌ಲೇನ್ ಬಾಡಿಗೆ ಮನೆಯಲ್ಲಿದ್ದ ಮೊದಲ ವರ್ಷದ ಪದವಿಯ 9 ವಿದ್ಯಾರ್ಥಿಗಳ ಬಳಿಗೆ ಮಾ.4ರಂದು ತೆರಳಿ, ‘5 ಜನ ಗಡ್ಡ ಮೀಸೆ ಬೋಳಿಸಿ ಬರಬೇಕು’ ಎಂದು ಹೆದರಿಸಿದ್ದರು. ಬೋಳಿಸಿ ಬಂದ ನಂತರ ಅವಾಚ್ಯವಾಗಿ ಬೈದು ಅವರಿಂದಲೇ ಟೀ ಮಾಡಿಸಿ ಕುಡಿದು ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿದ್ಯಾರ್ಥಿ ಕೆವಿನ್ ಮೆಥಾಲ್ ಜೆಕೋಬ್ ಎಂಬಾತ ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದರು.

    ಕೆವಿನ್‌ನನ್ನು ಎಳೆದಾಡಿದ್ದ ವಿದ್ಯಾರ್ಥಿಗಳು, ನಾವು ಹೇಳಿದ ರೀತಿಯಲ್ಲಿಯೇ ಬಟ್ಟೆಧರಿಸಬೇಕು; ನಮ್ಮದೇ ಗುಂಪಿನಲ್ಲಿ ಇರಬೇಕು. ಬೇರೆ ಯಾರೊಂದಿಗೂ ಮಾತನಾಡಬಾರದು. ಕೆಲವು ವಿಭಾಗದವರ ಜತೆ ಮಾತನಾಡಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ವಿಚಾರಿಸಿದ ಉಪನ್ಯಾಸಕರಿಗೂ ಹಲ್ಲೆ: ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗೆ ಅದೇ ಕಾಲೇಜಿನ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಬೈಕಂಪಾಡಿಯ ಮೊಹಮ್ಮದ್ ಬಾಝಿಲ್ (22), ಮುಲ್ಕಿಯ ಸಂಭ್ರಮ್ ಆಳ್ವ (20), ಕುಲಶೇಖರದ ಅಶ್ವಿತ್ ಜಾನ್ಸನ್ (21)ಮತ್ತು ಮುಕ್ಕದ ಕೆ.ಯು. ಶಮೀಲ್ (22) ಎಂಬುವರು ಫೆ.26ರಂದು ರ‌್ಯಾಗಿಂಗ್ ಮಾಡಿದ್ದರು. ಈ ಬಗ್ಗೆ ಕಾಲೇಜಿನ ರ‌್ಯಾಗಿಂಗ್ ತಡೆ ಸಮಿತಿಗೆ ದೂರು ಬಂದಿದ್ದು, ಸಮಿತಿ ಸದಸ್ಯ ಉಪನ್ಯಾಸಕ ಡಾ.ಪ್ರವೀಣ್ ವಿಚಾರಣೆ ನಡೆಸುತ್ತಿದ್ದಾಗ ಅವರಿಗೆ ಆರೋಪಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದರು. ಮಾ.3ರಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಕಾಲೇಜಿನಿಂದಲೂ ಅಮಾನತು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts