

ಬೆಂಗಳೂರು: ಹಾಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಪರ ಅಮೋಘ ಪ್ರದರ್ಶನದ ಮೂಲಕ ಭರವಸೆ ಮೂಡಿಸಿರುವ ಆಟಗಾರ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಕನ್ನಡಿಗ ರಚಿನ್ ರವೀಂದ್ರ ಅವರದ್ದು ಎಂಬುದು ಹೆಮ್ಮೆಯ ವಿಚಾರ.
ಇತ್ತೀಚಿಗೆ ರಚಿನ್ ರವೀಂದ್ರ ಅವರು ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿದ್ದರು. ಮೊಮ್ಮಗ ಮನೆಗೆ ಭೇಟಿ ನೀಡಿದ ಖುಷಿಗೆ ಅವರ ಅಜ್ಜಿ ದೃಷ್ಠಿ ತೆಗೆದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ರಚಿನ್, ಇಂತಹ ಅದ್ಭುತ ಕುಟುಂಬವನ್ನು ಪಡೆಯಲು ಅದೃಷ್ಟ ಮಾಡಿದ್ದೇನೆ. ಅಜ್ಜಿಯರು ದೇವತೆಗಳಾಗಿದ್ದು, ಅವರ ನೆನಪುಗಳು ಮತ್ತು ಆಶೀರ್ವಾದಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಜೈ ಶ್ರೀರಾಮ್ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ಆವೃತ್ತಿಯಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ರಚಿನ್ ರವೀಂದ್ರ ಅವರ ಕುಟುಂಬಸ್ಥರು ಈಗಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲೆಂಡ್ಗೆ ತೆರಳಿದ್ದರು ಬಳಿಕ ಅಲ್ಲಿಯೇ ನೆಲೆಸಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್ ಅಭಿಯಾನದಲ್ಲಿ ನ್ಯೂಜಿಲೆಂಡ್ ಪರ 9 ಪಂದ್ಯಗಳನ್ನು ಆಡಿರುವ ರಚಿನ್ 70.62ರ ಸರಾಸರಿಯಲ್ಲಿ 565ರನ್ಗಳಿಸುವ ಮೂಲಕ ಅತಿಹೆಚಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.