More

    ನಟ ಪ್ರಭಾಸ್​ ದೊಡ್ಡಪ್ಪ, ಟಾಲಿವುಡ್​ ರೆಬೆಲ್​ ಸ್ಟಾರ್​ ಕೃಷ್ಣಂ ರಾಜು ವಿಧಿವಶ

    ಹೈದರಾಬಾದ್​: ತೆಲುಗು ಚಿತ್ರರಂಗದ ದಿಗ್ಗಜ ನಟ ಮತ್ತು ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು (82) ಅವರು ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕೃಷ್ಣಂ ರಾಜು ಅವರು ನಟ ಪ್ರಭಾಸ್​ ಅವರ ದೊಡ್ಡಪ್ಪ.

    ತನ್ನ ಸಾಹಸಮಯ ಆ್ಯಕ್ಟಿಂಗ್​ ಶೈಲಿಯಿಂದಲೇ ಕೃಷ್ಣಂ ರಾಜು ಟಾಲಿವುಡ್​ನಲ್ಲಿ ರೆಬೆಲ್​ ಸ್ಟಾರ್​ ಎಂದೇ ಪರಿಚಿತರಾಗಿದ್ದರು. ಆಂಧ್ರ ಪ್ರದೇಶ ಸರ್ಕಾರ ಕೊಡಮಾಡುವ ಉತ್ತಮ ನಟ ಪ್ರಶಸ್ತಿಗೂ ಕೃಷ್ಣಂ ರಾಜು ಭಾಜನರಾಗಿದ್ದರು.

    ಕೃಷ್ಣಂ ರಾಜು ಅವರು ತಮ್ಮ ವೃತ್ತಿಜೀವನದಲ್ಲಿ 183 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 1966 ರಲ್ಲಿ ಕೆ. ಪ್ರತ್ಯಗಾತ್ಮ ನಿರ್ಮಿಸಿ ನಿರ್ದೇಶಿಸಿದ ಚಿಲಕ ಗೋರಿಂಕ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೃಷ್ಣಂ ರಾಜು ಅವರು ದಕ್ಷಿಣದ ಐದು ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ರಾಜ್ಯ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೃಷ್ಣಂ ರಾಜು ಸಕ್ರಿಯ ರಾಜಕಾರಣಿಯು ಆಗಿದ್ದರು.

    ಕೃಷ್ಣಂ ರಾಜು ಅವರು ಜೀವನ ತರಂಗಲು (1973), ಕೃಷ್ಣವೇಣಿ (1974), ಭಕ್ತ ಕಣ್ಣಪ್ಪ (1976), ಅಮರ ದೀಪಂ (1977), ಸತಿ ಸಾವಿತ್ರಿ (1978), ಕಟಕಟಾಲ ರುದ್ರಯ್ಯ (1978), ಮನವೂರಿ ಪಾಂಡವುಲು (1978), ರಂಗೂನ್ ರೌಡಿ (1979), ಶ್ರೀ ವಿನಾಯಕ ವಿಜಯಮು (1979), ಸೀತಾ ರಾಮುಲು (1980), ಟ್ಯಾಕ್ಸಿ ಡ್ರೈವರ್ (1981), ತ್ರಿಶೂಲಂ (1982), ಧರ್ಮಾತ್ಮುಡು (1983), ಬೊಬ್ಬಿಲಿ ಬ್ರಹ್ಮಣ್ಣ (1984), ತಂದ್ ಪಪ್ರಾಯುಡು (1986), ಮರಣ ಶಾಸನ (1987), ವಿಶ್ವನಾಥ ನಾಯಕುಡು (1987), ಅಂತಿಮ ತೀರ್ಪು (1988), ಬಾವ ಬಾವಮರಿದಿ (1993), ಪಲ್ನಾಟಿ ಪೌರುಷಮ್ (1994) ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

    1990 ರ ದಶಕದ ಉತ್ತರಾರ್ಧದಲ್ಲಿ ಅವರು ರಾಜಕೀಯದಲ್ಲಿ ಸಕ್ರಿಯರಾದರು. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಮತ್ತು ಕಾಕಿನಾಡ ಮತ್ತು ನರಸಾಪುರಂ ಕ್ಷೇತ್ರಗಳಿಂದ 12 ಮತ್ತು 13 ನೇ ಲೋಕಸಭೆಗೆ ಆಯ್ಕೆಯಾದರು. 1999 ರಿಂದ 2004 ರವರೆಗೆ ವಾಜಪೇಯಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಮಾರ್ಚ್ 2009ರಲ್ಲಿ ಚಿರಂಜೀವಿ ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷಕ್ಕೆ ಸೇರಿದರು. 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಾಜಮಂಡ್ರಿ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋತರು.

    ಇನ್ನು ಕೃಷ್ಣಂ ರಾಜು ಅವರು ಪ್ರಭಾಸ್​ ಅವರ ದೊಡ್ಡಪ್ಪ. ಕೃಷ್ಣಂ ರಾಜು ಅಂದರೆ ಪ್ರಭಾಸ್​​ಗೆ ತುಂಬಾ ಇಷ್ಟವಂತೆ. ಅವರನ್ನು ಯಾವಾಗಲೂ ಭೇಟಿ ಮಾಡುತ್ತಿದ್ದ ಪ್ರಭಾಸ್​, ಸಾಕಷ್ಟು ಹೊತ್ತು ಮಾತನಾಡುತ್ತಿದ್ದರಂತೆ. ಕೃಷ್ಣಂ ರಾಜು ಅವರನ್ನು ಬಿಗ್​ ಬಾಜಿ ಎಂದು ಪ್ರಭಾಸ್​ ಕರೆಯುತ್ತಿದ್ದರು ಎಂದು ದೊಡ್ಡಮ್ಮ ಶ್ಯಾಮಲಾ ದೇವಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. (ಏಜೆನ್ಸೀಸ್​)

    ಹಬ್ಬಕ್ಕೆಂದು ಊರಿಗೆ ಬಂದಿದ್ದ ಅಮ್ಮ-ಮಗಳು ದುರಂತ ಸಾವು: ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಸರ್ಕಾರಿ ಕಾರ್ನರ್​: ನಿರಾಕ್ಷೇಪಣಾ ಪತ್ರ ಕಡ್ಡಾಯವೇ?

    ನಾಯಿ ಕಚ್ಚಿದ್ರೆ ಆಹಾರ ಹಾಕೋರೇ ಹೊಣೆ!; ಶ್ವಾನಕ್ಕೆ ಲಸಿಕೆ ಹಾಕಿಸಿ, ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸಿ: ಸುಪ್ರೀಂ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts