More

    ಯುಪಿ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ

    ಲಖನೌ: ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಸತ್ಯಪಾಲ್​ ಸಿಂಗ್​ ಬಾಘೇಲ್​ ಅವರ ಬೆಂಗಾವಲು ವಾಹನ ಮೇಲೆ ಕಲ್ಲು ತೂರಾಟ ನಡೆಸಿ, ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮೇನ್​ಪುರಿ ಜಿಲ್ಲೆಯ ಕರ್ಹಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.

    ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​​ ಯಾದವ್​ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸತ್ಯಪಾಲ್​ ಸಿಂಗ್​ ಬಾಘೇಲ್​ ಅವರು ಸ್ಪರ್ಧಿಸುತ್ತಿದ್ದಾರೆ.

    ವರದಿ ಪ್ರಕಾರ ಯಾವುದೇ ಹಾನಿಯಾಗದೇ ಸತ್ಯಪಾಲ್​ ಸಿಂಗ್​ ಬಚಾವ್​ ಆಗಿದ್ದಾರೆ. ಆದಾಗ್ಯೂ, ಬೆಂಗಾವಲು ವಾಹನದ ಕಿಟಕಿ ಗಾಜು ಕಲ್ಲೇಟಿಗೆ ಪುಡಿ ಪುಡಿಯಾಗಿದ್ದು, ಕಾರಿನ ಕೆಲವೆಡೆ ಜಖಂ ಆಗಿವೆ. ಈ ದಾಳಿಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಈ ಘಟನೆಯ ಹಿಂದೆ ಸಮಾಜವಾದಿ ಪಾರ್ಟಿಯ ಗೂಂಡಾಗಳಿದ್ದಾರೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ ಆರೋಪ ಮಾಡಿದ್ದಾರೆ.

    ಅಖಿಲೇಶ್​ ಯಾದವ್​ ಜಿ ಅವರೇ ಚುನಾವಣೆಯಲ್ಲಿ ಸೋಲುವ ಭಯದಿಂದ ನಿಮ್ಮ ಗೂಂಡಾಗಳನ್ನು ಬಿಟ್ಟು ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಸತ್ಯಪಾಲ್​ ಸಿಂಗ್​ ಬಾಘೇಲ್​ ಮತ್ತು ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿಸಿದ್ದೀರಿ. ನಿನ್ನೆಯಷ್ಟೇ ಬಿಜೆಪಿ ಸಂಸದೆ ಗೀತಾ ಶಕ್ಯ ಅವರ ಮೇಲೂ ದಾಳಿ ನಡೆದಿದೆ. ಎರಡು ಘಟನೆಯ ದೋಷಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೌರ್ಯ ಅವರು ಸರಣಿ ಟ್ವೀಟ್​ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಕರ್ಹಾಲ್‌ನ ರಹಮತುಲ್ಲಾಪುರ ಗ್ರಾಮದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಯುಪಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುಂಚಿತವಾಗಿ ಬಾಘೇಲ್ ಅವರು ಆ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದರು ಮತ್ತು ಇತರ ಪಕ್ಷದ ನಾಯಕರೊಂದಿಗೆ ಅತಿಕುಲ್ಲಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಗ್ರಾಮದ ಹೊರಗಡೆ ಇದ್ದ ಕೆಲವು ಜನರು ಬಾಘೇಲ್​ ಅವರ ಬೆಂಗಾವಲು ವಾಹನ ಬರುತ್ತಿದ್ದಂತೆ ಅದರತ್ತ ಕಲ್ಲು ತೂರಾಟ ನಡೆಸಿದ್ದಾರೆ.

    ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಲ್ಲು ತೂರಾಟಗಾರರು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್​ಪಿ ಮಧುವನ್ ಕುಮಾರ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್​)

    ಕೆಂಪು ಕೋಟೆ ಹಿಂಸಾಚಾರದ ಪ್ರಮುಖ ಆರೋಪಿ ನಟ ದೀಪ್​ ಸಿಧು ಕಾರು ಅಪಘಾತದಲ್ಲಿ ದುರ್ಮರಣ

    ಬಾಲಿವುಡ್​ನ ಪ್ರಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ ವಿಧಿವಶ

    ಹಿಜಾಬ್ ಜತೆಗೆ ಈಗ ಟೋಪಿ ವಿವಾದ!; ಹೊನ್ನಾಳಿಯ ಸಾಸ್ವೇಹಳ್ಳಿ ಶಾಲೆಗೆ ಟೋಪಿ ಧರಿಸಿ ಬಂದ ಬಾಲಕರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts