More

    ಮೇಕೆ ಕಳ್ಳರಿಂದ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣ: ಬಂಧಿತ ಮೂವರಲ್ಲಿ ಇಬ್ಬರ ವಯಸ್ಸು 9 ಮತ್ತು 14

    ಪುದುಕ್ಕೊಟ್ಟೈ: ಮೇಕೆ ಕಳ್ಳರನ್ನು ಹಿಡಿಯಲು ಹೋಗಿ ಬರ್ಬರ ಹತ್ಯೆಯಾಗಿದ್ದ ಸಹಾಯಕ​ ಇನ್ಸ್​ಪೆಕ್ಟರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮೂವರಲ್ಲಿ ಇಬ್ಬರು ಅಪ್ರಾಪ್ತರು ಎಂಬ ಸಂಗತಿ ಸ್ಥಳೀಯ ಜನತೆ ಹಾಗೂ ಪೊಲೀಸ್​ ಇಲಾಖೆಯನ್ನು ಆತಂಕಕ್ಕೆ ದೂಡಿದೆ.

    ಮೂವರು ಆರೋಪಿಗಳನ್ನು ತಮಿಳುನಾಡಿನ ಕೀರನೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್​ ಠಾಣೆಯಲ್ಲಿ ವಿಶೇಷ ಸಹಾಯಕ ಇನ್ಸ್​ಪೆಕ್ಸರ್​ ಆಗಿದ್ದ ಭೂಮಿನಾಥನ್ (50)​ ಅವರು ನ.21ರ ಮುಂಜಾನೆ ಕೊಲೆಯಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಮೂವರು ಆರೋಪಿಗಳಲ್ಲಿ ಇಬ್ಬರು 9 ಮತ್ತು 14 ವಯಸ್ಸಿನವರು. ಉಳಿದ ಇನ್ನೊಬ್ಬ ಆರೋಪಿ ಮಣಿಕಂದನ್​ ವಯಸ್ಸು 19. ಭಾನುವಾರ ಮುಂಜಾನೆ ಮೇಕೆ ಕಳ್ಳತನ ಮಾಡಿ ಬೈಕ್​ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಡಿಯಲು ಭೂಮಿನಾಥನ್​ ಬೆನ್ನಟ್ಟಿ ಹೋಗಿದ್ದರು. ಆದರೆ, ಆರೋಪಿಗಳು ಕುಡುಗೋಲಿನಿಂದ ಭೂಮಿನಾಥನ್​ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆ ಬೆಳಗ್ಗೆ 2 ರಿಂದ 3 ಗಂಟೆ ಸಮಯದಲ್ಲಿ ನಡೆದಿತ್ತು.

    ಆರೋಪಿ ಮಣಿಕಂದನ್ ಥಂಜಾವೂರ್​ ಜಿಲ್ಲೆಯ ನಿವಾಸಿ. ಉಳಿದ ಇಬ್ಬರು ಅಪ್ರಾಪ್ತ ಆರೋಪಿಗಳು ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿಗಳು. ಮೇಕೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಆರೋಪಿಗಳನ್ನು ಭೂಮಿನಾಥನ್​ ತಡೆದಿದ್ದಾರೆ. ಆದರೆ, ಆರೋಪಿಗಳು ಬೈಕ್​ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಬಳಿಕ ಅವರನ್ನು ಹಿಮ್ಮೆಟ್ಟಿಸಿ ಹೋಗಿ, ಮೂವರನ್ನು ತಿರುಚಿ-ಪುದುಕ್ಕೊಟ್ಟೈ ಗಡಿ ಹತ್ತಿರದ ಪಲ್ಲಥುಪಟ್ಟಿಯಲ್ಲಿ ಹಿಡಿದಿದ್ದಾರೆ. ಈ ವೇಳೆ ಅವರ ಮೇಲೆ ಕುಡುಗೋಲಿನಿಂದ ಮೂವರು ದಾಳಿ ಮಾಡಿದ್ದಾರೆ. ತಲೆಯ ಮೇಲೆ ಹೆಚ್ಚು ದಾಳಿ ಮಾಡಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಭೂಮಿನಾಥನ್​ ಮೃತಪಟ್ಟಿದ್ದರು.

    ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭೂಮಿನಾಥನ್​ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರವೇ ನೆರವೇರಿತು. ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಮೇಕೆ ಕಳ್ಳರನ್ನು ಚೇಸ್​ ಮಾಡಿದ ಇನ್ಸ್​ಪೆಕ್ಟರ್​ ಬರ್ಬರ ಹತ್ಯೆ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

    ಬದಲಾದ ಸಮಂತಾ ನಿಲುವು: ಮಾಜಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ರಾ ಸೌತ್​ ಬ್ಯೂಟಿ!

    LLB ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್​: ಠಾಣಾಧಿಕಾರಿಯ ಕರಾಳ ಮುಖ ಮತ್ತೊಮ್ಮೆ ಬಯಲು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts