ಮುಂಬೈ: ಮಹಾಮಾರಿ ಕರೊನಾ ವೈರಸ್ ಮೂರನೇ ಅಲೆಯ ತೀವ್ರತೆಯ ಭೀತಿಯಲ್ಲಿರುವ ದೇಶದ ಜನತೆಗೆ ಶುಭ ಸೂಚನೆಯೊಂದು ಸಿಕ್ಕಿದೆ. ಮೊದಲು ಮತ್ತು ಎರಡನೇ ಅಲೆಯಲ್ಲಿ ಇಡೀ ದೇಶದಲ್ಲೇ ಮಹಾರಾಷ್ಟ್ರ ಸೋಂಕಿನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿತ್ತು. ಅದರಲ್ಲೂ ರಾಜಧಾನಿ ಮುಂಬೈ ಕೋವಿಡ್ ಕೇಂದ್ರ ಬಿಂದುವಾಗಿತ್ತು. ಇದೀಗ ಮೂರನೇ ಅಲೆಯ ಸಂದರ್ಭದಲ್ಲೂ ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿದೆ. ಆದರೆ, ಇದೀಗ ಗುಡ್ ನ್ಯೂಸ್ ಒಂದು ಬಂದಿದ್ದು, ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಕುಸಿದಿದೆ.
ಮುಂಬೈನಲ್ಲಿ ಕಳೆದ 24 ಗಂಟೆಯಲ್ಲಿ ಕೇವಲ 6,032 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. 12 ಮಂದಿ ಮೃತರಾಗಿದ್ದು, 18,241 ಮಂದಿ ಗುಣಮುಖರಾಗಿದ್ದಾರೆ. ಮುಂಬೈ ಪಾಸಿಟಿವಿಟಿ ದರ ಶೇ. 12.89 ರಿಂದ 10ಕ್ಕೆ ಕುಸಿದಿದೆ. ಸದ್ಯ ಮುಂಬೈನಲ್ಲಿ 31,856 ಸಕ್ರೀಯ ಪ್ರಕರಣಗಳಿವೆ.
ಮುಂಬೈನ ಸದ್ಯದ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ಯಾವುದೇ ಕಾರಣಕ್ಕೂ ಚಿಂತಿಸಬಾರದು ಎಂದು ಬಾಂಬೆ ಬೃಹತ್ ಮಹಾನಗರ ಪಾಲಿಕೆ (ಬಿಎಂಸಿ) ಬಾಂಬೆ ಹೈಕೋರ್ಟ್ಗೆ ತಿಳಿಸಿದೆ. ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಕುಸಿಯುತ್ತಿದೆ ಎಂದು ಹಿರಿಯ ವಕೀಲ ಅನಿಲ್ ಸಖ್ರೆ ಅವರು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮುಂಬೈನ ಪ್ರಸಿದ್ಧ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ಜೆಸಾಲ್ ಶೆತ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಈ ಅಲೆಯಲ್ಲಿ ನಾವು ಆಸ್ಪತ್ರೆ ದಾಖಲಾಗುವಿಕೆಯನ್ನು ನೋಡಲಿಲ್ಲ ಎಂದು ಖಚಿತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವ ವರ್ಸಾ ಗಾಯ್ಕ್ವಾಡ್, ಮುಂದಿನ ವಾರದಿಂದ ಶಾಲೆಗಳನ್ನು ಪುನಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸ್ಥಳೀಯವಾಗಿ ಕರೊನಾ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳನ್ನು ತೆರೆಯುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಕರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಫೆಬ್ರವರಿ 15ರವರೆಗೆ ಶಾಲೆಗಳು ಬಂದ್ ಮಾಡುವಂತೆ ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು. ರೂಪಾಂತರಿ ಒಮಿಕ್ರಾನ್ ಭೀತಿಯಿಂದಾಗಿ ಮೂರನೇ ಅಲೆಗೆ ಹೆದರಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪ್ ದಿನ ನಿತ್ಯದ ಕರೊನಾ ಪ್ರಕರಣಗಳು ಗಣನೀಯವಾಗಿ ಕುಸಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಕರೊನಾ ಸಾಂಕ್ರಾಮಿಕದ ಮೂರನೇ ಅಲೆಯ ಸಮಯದಲ್ಲಿ, ಮುಂಬೈನಲ್ಲಿ ಹೊಸ ಕರೊನಾ ವೈರಸ್ ಪ್ರಕರಣಗಳು ಸ್ಥಿರವಾಗುತ್ತಿರುವಂತೆ ತೋರುತ್ತಿದ್ದರೆ, ಇತ್ತ ಬೆಂಗಳೂರು ಮತ್ತು ಪುಣೆಯಂತಹ ಇತರ ನಗರಗಳಲ್ಲಿ ಸೋಂಕುಗಳು ಹೆಚ್ಚಾಗುತ್ತಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಬಹಿರಂಗಪಡಿಸಿದೆ. ಆದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ನಿಟ್ಟುಸಿರುವ ಬಿಡುವಂತಾಗಿ. ಮುಂಬೈನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಕುಸಿದಿರುವುದು ದೇಶದ ಪಾಲಿಗೆ ಒಳ್ಳೆಯ ಸೂಚನೆ ಎಂದು ವಿಶ್ಲೇಷಿಸಬಹುದಾಗಿದೆ. (ಏಜೆನ್ಸೀಸ್)
ಕೆಲವೇ ತಿಂಗಳ ಹಿಂದೆ ನಿಕ್ಕಿ ಗಲ್ರಾನಿ ಮನೆಯಲ್ಲಿ ಕೆಲ್ಸಕ್ಕೆ ಸೇರಿದ್ದ ಯುವಕನಿಂದ ನೀಚ ಕೃತ್ಯ..!
ನಾನು ನಿಮ್ಮ ಫ್ಯಾನ್ ಅಂದ್ಕೊಂಡು ಬಂದ ಮಹಿಳೆಗೆ ಖ್ಯಾತ ಯೂಟ್ಯೂಬರ್ ಕೊಟ್ಟಿದ್ದು ಬಿಗ್ ಶಾಕ್!
ಮಾರ್ಚ್ 11ರ ಬಳಿಕ ಅಂತ್ಯವಾಗಲಿದೆ ಕರೊನಾ ಸಂಕಷ್ಟ; ಕೋವಿಡ್ 3ನೇ ಅಲೆ ಜ. 23ರಂದು ಉತ್ತುಂಗಕ್ಕೆ ತಲುಪುವ ಸಾಧ್ಯತೆ