More

    ಟೆನಿಸ್ ಕೋರ್ಟ್‌ಗೆ ವಿದಾಯ ನಿರ್ಧಾರ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಕೊಟ್ಟ ಅಸಲಿ ಕಾರಣಗಳಿವು…

    ನವದೆಹಲಿ: ಭಾರತೀಯ ಟೆನಿಸ್​ ಲೋಕದ ಶ್ರೇಷ್ಠ ಆಟಗಾರ್ತಿ ಎನಿಸಿರುವ ಸಾನಿಯಾ ಮಿರ್ಜಾ 2022ರ ಟೆನಿಸ್ ಋತುವಿನ ಅಂತ್ಯಕ್ಕೆ ನಿವೃತ್ತಿ ಹೊಂದುವುದಾಗಿ ಬುಧವಾರ (ಜ.19) ಪ್ರಕಟಿಸಿದ್ದಾರೆ. 35 ವರ್ಷದ ಸಾನಿಯಾ ನಿವೃತ್ತಿಯ ಘೋಷಣೆ ಬೆನ್ನಲ್ಲೇ ಕಾರಣ ಏನಿರಬಹುದೆಂಬ ಚರ್ಚ ಜಾಲತಾಣದಲ್ಲಿ ಜೋರಾಗಿ ನಡೆದಿತ್ತು. ಇದೀಗ ಸ್ವತಃ ಸಾನಿಯಾ ಅವರೇ ಕಾರಣಗಳನ್ನು ತಿಳಿಸಿ, ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

    ಮಾಧ್ಯಮವೊಂದರ ಜತೆ ಮಾತನಾಡಿರುವ ಸಾನಿಯಾ, ನನಗೂ ಅದೇ ಅನುಭವವಾಗಿದೆ. ನನ್ನ ನಿರ್ಧಾರ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಎಂದು ನಾನು ಭಾವಿಸುತ್ತೇನೆ. ಈ ಋತುವಿನ ಅಂತ್ಯದಲ್ಲೇ ವಿದಾಯ ಹೇಳುತ್ತೇನೆ ಅಂತಾ ನಾನು ಘೋಷಣೆ ಮಾಡಬಾರದಿತ್ತು. ನನ್ನ ನಿರ್ಧಾರದಿಂದ ನಿಜಕ್ಕೂ ಎಲ್ಲರೂ ಭಾವುಕರಾದರು. ನಾನು ಸಾಕಷ್ಟು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಟೆನಿಸ್​ ನನ್ನ ಜೀವನದ ಮಹತ್ವದ ಪಾತ್ರವಾಗಿ ಸದಾ ಉಳಿಯಲಿದೆ. ಅಳಿಯಲಾಗದ ನೆನಪುಗಳು ಮತ್ತು ಸಾಧನೆಗಳಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಸಾನಿಯಾ ತಿಳಿಸಿದ್ದಾರೆ.

    ಹಲವು ದಿನಗಳಿಂದ ವಿದಾಯದ ನಿರ್ಧಾರ ನನ್ನ ಮನಸ್ಸಿನಲ್ಲಿತ್ತು ಮತ್ತು ಅದರ ಬಗ್ಗೆಯೇ ನಾನು ಚಿಂತಿಸುತ್ತಿದ್ದೆ. ನನ್ನ ನಿರ್ಧಾರ ಕೇಳಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೂಡ ದಿಗ್ಭ್ರಮೆಗೊಂಡರು. ಆದರೆ, ನನಗೆ 35 ವರ್ಷ ಮತ್ತು ಕೆಲ ಸಮಯದಲ್ಲಿ ಇದನ್ನು ನಿರೀಕ್ಷಿಸುತ್ತಿರಬೇಕು ಎಂದು ನಾನು ಭಾವಿಸುತ್ತೇನೆ ಎಂದರು.

    ಇತ್ತೀಚೆಗೆ ನನ್ನ ದೇಹ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ನನ್ನ ವಿದಾಯದ ನಿರ್ಧಾರಕ್ಕೆ ಇದುವೇ ಪ್ರಮುಖ ಕಾರಣವಾಗಿದೆ. ಈ ಋತುವಿನ ಬಳಿಕ ನಾನು ಮುಂದುವರಿಯುವುದಿಲ್ಲ ಎಂದರು. ಅಲ್ಲದೆ, ತಾಯಿಯಾದ ನಂತರ ತಮ್ಮ ಜೀವನದಲ್ಲಿ ಆದ್ಯತೆಗಳು ಹೇಗೆ ಬದಲಾಗಿವೆ ಮತ್ತು ನಿವೃತ್ತಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಾಂಕ್ರಾಮಿಕ ರೋಗವು ವಹಿಸಿದ ಪಾತ್ರವನ್ನು ಸಹ ವಿವರಿಸಿದರು.

    ನನ್ನ ದೇಹ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಅನಿಸುತ್ತಿದೆ. ಈಗಾಗಲೇ ನನಗೆ ಮೂರು ಪ್ರಮುಖ ಸರ್ಜರಿಗಳು ಆಗಿವೆ. ಎರಡು ಮಂಡಿ ಮತ್ತು ಒಂದು ಮೊಣಕೈಗೆ ಸರ್ಜರಿಯಾಗಿದೆ. ನಾನು ಬಯಸಿದ ರೀತಿಯಲ್ಲಿ ನನ್ನ ದೇಹ ನನಗೆ ಸಹಕಾರ ಮಾಡುತ್ತಿಲ್ಲ. ಬಹುಶಃ ನನ್ನ ದೇಹದಿಂದ ನನ್ನ ನಿರೀಕ್ಷೆ ಹೆಚ್ಚಾಗಿರಬಹುದು. ಅಲ್ಲದೆ, ನಾನು ಮಗುವನ್ನು ಸಹ ಹೊಂದಿದ್ದೇನೆ ಮತ್ತು ನನ್ನ ದೇಹವು ಬಹಳಷ್ಟು ಕುಗ್ಗಿ ಹೋಗಿದೆ ಎನ್ನುವ ಮೂಲಕ ವಿದಾಯದ ಹಿಂದಿನ ಸೂಕ್ತ ಕಾರಣಗಳನ್ನು ಸಾನಿಯಾ ತಿಳಿಸಿದರು.

    ಬಹುಶಃ ಇದು ಮಾನಸಿಕ ಆರೋಗ್ಯದ ಚೌಕಟ್ಟಿನ ಬಗ್ಗೆಯೂ ಆಗಿರಬಹುದು. ನೀವು ಮಗುವನ್ನು ಹೊಂದಿರುವಾಗ, ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೀರಿ ಮತ್ತು ಕೆಲವು ಆದ್ಯತೆಗಳು ಕೂಡ ಬದಲಾಗುತ್ತವೆ. ಸದ್ಯದ ಕರೊನಾ ಸಾಂಕ್ರಾಮಿಕವು ನನ್ನನ್ನು ಯೋಚಿಸುವಂತೆ ಮಾಡಿದೆ. ಏಕೆಂದರೆ ವರ್ಷದಲ್ಲಿ ಇಷ್ಟು ವಾರಗಳ ಕಾಲ ಲಸಿಕೆ ಹಾಕದ ಅಂಬೆಗಾಲಿಡುವ ಮಗುವಿನೊಂದಿಗೆ ಪ್ರಯಾಣಿಸುವುದು ಸುಲಭವಲ್ಲ ಮತ್ತು ಅವನನ್ನು ಅಪಾಯಕ್ಕೆ ಒಳಪಡಿಸುವುದು ಸರಿಯಲ್ಲ ಎಂದು ಹೇಳಿದರು.

    ಮಿಶ್ರ ಡಬಲ್ಸ್‌ನಲ್ಲಿ 3 ಮತ್ತು ಮಹಿಳಾ ಡಬಲ್ಸ್‌ನಲ್ಲಿ 3 ಸೇರಿದಂತೆ ಒಟ್ಟು 6 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯಾಗಿರುವ ಸಾನಿಯಾ, ಮಹಿಳಾ ಟೆನಿಸ್‌ನಲ್ಲಿ ಅತ್ಯಧಿಕ ಯಶಸ್ಸು ಕಂಡ ಭಾರತೀಯರೆನಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲು ಕಂಡ ಬಳಿಕ ಸಾನಿಯಾ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. (ಏಜೆನ್ಸೀಸ್​)

    ಅವಮಾನಿಸಿದ್ದ ಯುವ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಆನಂದ್​ ಮಹೀಂದ್ರಾ ಹೇಳಿದ್ದು ಹೀಗೆ…

    ಮಾರ್ಚ್​ನಲ್ಲಿ ಚುನಾವಣೆ ಪರ್ವ: ಬಜೆಟ್ ಬಳಿಕ ತಾಪಂ-ಜಿಪಂ, ಏಪ್ರಿಲ್​ನಲ್ಲಿ ಬಿಬಿಎಂಪಿ ಫೈಟ್ ಬಹುತೇಕ ಫಿಕ್ಸ್

    ಮೂರು ತಿಂಗಳಲ್ಲಿ ಬ್ಯಾಕ್​ಲಾಗ್ ಹುದ್ದೆ ಭರ್ತಿ; ಉಸ್ತುವಾರಿ ಉಪಸಮಿತಿಗೆ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts