More

    Inside Story: ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಕಣ್ಣೀರಿಗೆ ಸಂಸತ್ತಿನಲ್ಲಿ ನಡೆದ ಈ ಘಟನೆಗಳೇ ಕಾರಣ!

    ಪ್ರಜಾಪ್ರಭುತ್ವಕ್ಕೇ ಕೊಡಲಿ ಏಟು ಬಿದ್ದಿದೆ. ಯಾವ ಸ್ಥಳವನ್ನ ಸಾಕ್ಷಾತ್ ದೇವಾಲಯ ಅಂತಾನೇ ಜನತಾ ಜನಾರ್ದನ ನಂಬಿದ್ದನೋ, ಅದೇ ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬಂದೊದಗಿದೆ. ರಾಜ್ಯಸಭೆಯಲ್ಲಿ ನಡೆದ ಬೆಳವಣಿಗೆಗಳನ್ನ ನೋಡಿದ್ರೆ, ದೇಶವೇ ತಲೆತಗ್ಗಿಸುವಂತೆ ನಡೆದುಕೊಂಡಿದ್ದಾರೆ ಪ್ರತಿಪಕ್ಷದ ಸದಸ್ಯರು. ಇದರಿಂದ ನೊಂದ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಗದ್ಗದಿತರಾಗಿದ್ದಾರೆ.

    ಭಾರತದ ಪ್ರಜಾಪ್ರಭುತ್ವ ದೇಗುಲ ಅಪವಿತ್ರ !
    ರಾಜ್ಯಸಭಾ ಸಭಾಪತಿಗಳೂ ಆಗಿರುವ ವೆಂಕಯ್ಯ ನಾಯ್ಡು ಗದ್ಗದಿತರಾಗಿ ಕಣ್ಣೀರು ಹಾಕಿದ್ದು ಏಕೆ ಗೊತ್ತಾ? ಕಳೆದ 23 ದಿನಗಳಿಂದ ಸಂಸತ್​ನ ಉಭಯ ಸದನಗಳಲ್ಲಿ ಪ್ರತಿಪಕ್ಷ ಸದಸ್ಯರು ನಡೆದುಕೊಂಡ ರೀತಿ ನಾಯ್ಡು ಕಣ್ಣಲ್ಲಿ ನೀರು ಸುರಿಸುವಂತಾಗಿದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಮಂಗಳವಾರ ತೋರಿದ ಅಶಿಸ್ತಿನ ವರ್ತನೆಯನ್ನ ಸಭಾಪತಿ ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ.

    ಪ್ರತಿಪಕ್ಷ ಸದಸ್ಯರ ಗದ್ದಲ ಹಾಗೂ ಸದಸ್ಯರೊಬ್ಬರು ಅಧ್ಯಕ್ಷರ ಮೇಜಿನ ಮೇಲೆ ಕಡತ ಎಸೆದ ನಡೆ ನಾಯ್ಡುಗೆ ತೀವ್ರ ನೋವು ತಂದಿದೆ. ಪ್ರಜಾಪ್ರಭುತ್ವ ದೇಗುಲದ ಗರ್ಭಗುಡಿ ಎಂದೇ ಪರಿಗಣಿಸೋ ಸ್ಥಳದಲ್ಲಿ ಕೆಲ ಸದಸ್ಯರ ಅನುಚಿತ ವರ್ತನೆ ಸದನದ ಪಾವಿತ್ರ್ಯವನ್ನೇ ನಾಶವಾಗುವಂತೆ ಮಾಡಿದೆ. ಪ್ರತಿಪಕ್ಷ ಸದಸ್ಯರ ಈ ನಡೆಯನ್ನು ಖಂಡಿಸೋಕೆ ಪದಗಳೇ ಇಲ್ಲ. ಕಳೆದ ರಾತ್ರಿ ನಿದ್ರೆಯಿಲ್ಲದೇ ಕಳೆದಿದ್ದಾಗಿ ಹೇಳುತ್ತಾ ವೆಂಕಯ್ಯ ನಾಯ್ಡು ಭಾವುಕರಾಗಿಬಿಟ್ಟರು.

    ಇಷ್ಟು ಮಾತ್ರವಲ್ಲದೇ ಸದನ ಇಷ್ಟು ಕೆಳಮಟ್ಟಕ್ಕೆ ಇಳಿಯೋಕೆ ಪ್ರಚೋದನೆ ಏನು ಎಂಬುದನ್ನ ಕಂಡುಕೊಳ್ಳೋದೇ ಕಷ್ಟ ಎನಿಸಿದೆ. ಪ್ರಜಾ ಪ್ರಭುತ್ವದ ಪವಿತ್ರ ಸ್ಥಳದಲ್ಲಿ ನಡೆಯುತ್ತಿರೋ ಇಂತಹ ವಿದ್ಯಮಾನಗಳ ಪರಿಣಾಮಗಳನ್ನ ಊಹಿಸಲು ಸಭಾಪತಿಯಾಗಿ ನನಗೆ ಭಯ ಉಂಟಾಗುತ್ತಿದೆ ಎಂದು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ. ಇಷ್ಟಲ್ಲದೇ, ಕೃಷಿಕಾನೂನು ಸಂಬಂಧಪಟ್ಟಂತೆ ಪ್ರತಿಪಕ್ಷಗಳ ಬಳಿ ಆಕ್ಷೇಪಣೆಗಳಿದ್ರೆ ಸದನದಲ್ಲೇ ಚರ್ಚಿಸಬಹುದಿತ್ತು. ಅಲ್ಲಿ ಪ್ರತಿಭಟಿಸಬಹುದಿತ್ತು ಅಥವಾ ವಿರುದ್ಧವಾಗಿ ಮತ ಹಾಕಬಹುದಿತ್ತು. ಆದ್ರೆ, ಇದನ್ನೇ ಮಾಡಿ..ಇದನ್ನೇ ಮಾಡಬೇಡಿ ಅಂತಾ ಸರ್ಕಾರವನ್ನ ಬಲವಂತ ಮಾಡೋಕೆ ಸಾಧ್ಯವಿಲ್ಲ. ಚರ್ಚೆ ನಡೆಸೋಕೆ ಸುವರ್ಣಾವಕಾಶವಿದ್ರೂ, ಸದನ ಸುಗಮವಾಗಿ ನಡೆಯೋಕೆ ಬಿಡಬಾರದು ಎಂಬುದೇ ಏಕೈಕ ಉದ್ದೇಶವಾಗಿತ್ತು ಎಂದು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಂಸತ್ ಎಂದ್ರೆ ದೇಶದ ಪ್ರಜಾಪ್ರಭುತ್ವದ ದೇಗುಲ. ದೇಶದ 135 ಕೋಟಿ ಜನರ ಒಳಿತಿಗಾಗಿ ರೂಪುಗೊಂಡ ಶಾಸನಸಭೆ, ಸಂಸತ್​ಗಳು ಇದೀಗ ಪಕ್ಷಗಳ ಪಾಲಿನ ಶಕ್ತಿಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಂತೆ ಕಾಣುತ್ತಿದೆ. ಹೇಯ ಸಂಗತಿ ಎಂದ್ರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು, ಗದ್ದಲ ನಿಯಂತ್ರಿಸೋಕೆ ಬಂದ. ಕೋಪೋದ್ರಿಕ್ತ ಸದಸ್ಯರನ್ನು ಸಮಾಧಾನಪಡಿಸೋಕೆ ಬಂದ ಮಹಿಳಾ ಮಾರ್ಷಲ್​ ಮೇಲೂ ಕೈ ಮಾಡಿದ್ದಾರೆ. ಮಹಿಳಾ ಮಾರ್ಷಲ್ ತಲೆಗೆ ಹೊಡೆಯಲು ಮುಂದಾದ ಇಬ್ಬರು ಕಾಂಗ್ರೆಸ್ ಸದಸ್ಯರು.

    ಪೆಗಾಸಿಸ್ ಬೇಹುಗಾರಿಕೆ ಹಾಗೂ ಕೃಷಿ ಕಾಯ್ದೆ ಸಂಬಂಧಪಟ್ಟಂತೆ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಪಕ್ಷ, ಶಿವಸೇನೆ, ಎನ್​ಸಿಪಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಕೋಲಾಹಲ ಎಬ್ಬಿಸಿದರು. ಸ್ವತಂತ್ರೋತ್ತರ ರಾಜ್ಯಸಭಾ ಇತಿಹಾಸದಲ್ಲೇ ಕಪ್ಪುಚುಕ್ಕಿ ಎಂಬಂತಹ ಘಟನೆಗಳು ಈ ಸಲದ ಅಧಿವೇಶನದಲ್ಲಿ ನಡೆದುಹೋಗಿವೆ. ಜನ ಹಾಗೂ ದೇಶದ ಬಗ್ಗೆ ಚಿಂತಿಸಬೇಕಾದ, ಸಂಸತ್​ನ ಚಿಂತಕರ ಚಾವಡಿ ಅಂತಾನೇ ರಾಜ್ಯಸಭೆ ಕರೆಸಿಕೊಳ್ಳುತ್ತದೆ. ಆದ್ರೆ, ಈ ಗೌರವವನ್ನೇ ಹಾಳುಗೆಡಹಿದ್ದಾರೆ ಪ್ರತಿಪಕ್ಷ ಸದಸ್ಯರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಲ್ಲರ ಹಕ್ಕು ನಿಜ. ಆದ್ರೆ, ಕುಳಿತು ಪರಿಹಾರಕಂಡುಕೊಳ್ಳೋ ಅವಕಾಶ ಎಲ್ಲರಿಗೂ ಇದೆ. ನಾಯ್ಡು ಹೇಳಿದಂತೆ ಬೇಹುಗಾರಿಕೆಯೋ..ಅಥವಾ ಕೃಷಿ ಕಾಯ್ದೆಯೋ, ಆರೋಗ್ಯಪೂರ್ಣ ಚರ್ಚೆ ನಡೆಸೋ ಮೂಲಕ ಸರ್ಕಾರವನ್ನ ಪ್ರಶ್ನಿಸೋ ಎಲ್ಲಾ ಅವಕಾಶವೂ ಪ್ರತಿಪಕ್ಷಗಳಿಗೆ ಇತ್ತು. ಇದಕ್ಕೆ ಉತ್ತರ ಕೊಡಬೇಕಾದ ಕರ್ತವ್ಯವೂ ಕೇಂದ್ರ ಸರ್ಕಾರಕ್ಕಿತ್ತು.

    ಆದ್ರೆ, ಮೊದಲೇ ಪ್ರೀಪ್ಲಾನ್ ಮಅಡಿಬಂದಂತಿದ್ದ ಪ್ರತಿಪಕ್ಷಗಳು, ಸುಲಲಿತ ಕಲಾಪದ ಬಗ್ಗೆ ಆಸಕ್ತಿ ತೋರಲಿಲ್ಲ. ಪ್ರಧಾಣಿ ಮೋದಿರವರೇ ಹೊಸ ಸಚಿವರನ್ನ ಪರಿಚಯ ಮಾಡಿಕೊಡೋಕೂ ಅನುವು ಮಾಡಿಕೊಡಲಿಲ್ಲ ಪ್ರತಿಪಕ್ಷ ಪಡೆ. ಏನೇ ಆಗ್ಲಿ, ಬುದ್ಧಿವಂತರ ಸದನ ಎಂದೇ ಪರಿಗಣಿತ ರಾಜ್ಯಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ನಡೆದುಕೊಂಡ ರೀತಿ ಇಡೀ ಪ್ರಜಾ ಪ್ರಭುತ್ವಕ್ಕೇ ಅಪ ಮಾನಕರ ಅನ್ನೋದು ನಿಜ.

    ಇದು ಜಂಗೀಕುಸ್ತಿ ಅಖಾಡವೋ? ಪ್ರಜಾಪ್ರಭುತ್ವದಲ್ಲಿ ಮೇಧಾವಿಗಳ ಸದನವೋ? ಹೀಗಂತಾ ಅನುಮಾನ ಮೂಡಿಸಿದ್ದು ರಾಜ್ಯಸಭೆ. ಇಲ್ಲಿ ಸದಸ್ಯರು ನಡೆದುಕೊಂಡ ರೀತಿ ಪ್ರಜಾಸತ್ತೆಗೇ ಅಗೌರವ ತಂದಿದೆ. ಈ ಹೊತ್ತಿನಲ್ಲಿ ಈ ಸಲದ ಅಧಿವೇಶನ ಪ್ರತಿಪಕ್ಷಗಳ ಪ್ರತಿಭಟನೆಗೆ ಬಹುತೇಕ ಬಲಿಯಾಗಿಹೋಗಿದೆ. ಸದನದ ಉತ್ಪಾದಕತೆಯೂ ಪಾತಾಳಕ್ಕೆ ಇಳಿದಿದೆ.

    6ನೇ ಅಧಿವೇಶನ ಪ್ರತಿಪಕ್ಷ ಅಬ್ಬರಕ್ಕೆ ಆಹುತಿ!
    ಈ ಸಲದ ಸಂಸತ್ ಮುಂಗಾರು ಅಧಿವೇಶನಕ್ಕೆ ಗ್ರಹಣ ಹಿಡಿದಂತಾಗಿದೆ. ಜುಲೈ 19ರಿಂದ ಆಗಸ್ಟ್ 13ರವರೆಗೆ ನಿಗದಿಯಾಗಿದ್ದ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನ ಗದ್ದಲದಲ್ಲೇ ಮುಳುಗಿಹೋಯಿತು. ಪೆಗಾಸಿಸಿ ಬೇಹುಗಾರಿಕೆ ವಿವಾದ ಹಾಗೂ ಕೃಷಿ ಕಾಯ್ದೆ ವಿರೋಧಿ ಸೋ ಭರದಲ್ಲಿ ತಿಪಕ್ಷಗಳು ನಡೆಸಿದ ಅಬ್ಬರಕ್ಕೆ ಉಭಯ ಸದನಗಳ ಕಲಾಪ ಸಂಪೂರ್ಣ ಬಲಿಯಾಗಬೇಕಾಯಿತು.

    17ನೇ ಲೋಕಸಭೆಯಲ್ಲಿ ನಿಗದಿತ 90 ಗಂಟೆಗಳ ಅವಧಿಯಲ್ಲಿ ಕಾರ್ಯಕಲಾಪ ನಡೆಸಿದ್ದು ಕೇವಲ 21 ಗಂಟೆ 14 ನಿಮಿಷ. ಅಂದ್ರೆ ನಿಗದಿತ ಸಮಯದ ಶೇ. 23 ರಷ್ಟು ಸಮಯ ಕಲಾಪ ನಡೆದ್ರೆ ಶೇ.77ರಷ್ಟು ಕಲಾಪ ಪ್ರತಿಪಕ್ಷಗಳ ಗಲಾಟೆ ನುಂಗಿಹಾಕಿತು. ಗದ್ದಲ ಮಿತಿಮೀರಿದ ಕಾರಣ ನಿಗದಿತ ಅವಧಿಗೂ 2 ದಿನ ಮುನ್ನವೇ ಲೋಕಸಭಾ ಕಲಾಪವನ್ನ ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಯಿತು. ಈ ಹಿಂದಿನ ಐದು ಅಧಿವೇಶನಗಳಲ್ಲಿ ಲೋಕಸಭಾ ಕಲಾಪದ ಉತ್ಪಾದಕತಾ ಪ್ರಮಾಣ ಶೇ. 100 ಮೀರಿದ್ರೆ, ಈ ಬಾರಿ ಇದು ಶೇ. 22ಕ್ಕೆ ಬಂದು ನಿಂತಿದೆ.

    ಮೊದಲರಿಂದ ಐದನೇ ಅಧಿವೇಶನದವರೆಗೆ ಕಲಾಪದ ಅವಧಿ ನಷ್ಟವಾಗಿದ್ದು ಒಟ್ಟು ಅಂದಾಜು 40 ಗಂಟೆ ಮಾತ್ರ. ಆದ್ರೆ, ಈ ಸಲದ ಆರನೇ ಅಧಿವೇಶನವೊಂದರಲ್ಲೇ 74 ಗಂಟೆ 46 ನಿಮಿಷ ಕಾಲ ಗದ್ದಲದಿಂದ ಲಾಸ್ ಆಯಿತು. ಇಷ್ಟು ಮಾತ್ರವಲ್ಲದೇ ರಾಜ್ಯಸಭೆಯಲ್ಲೂ ಈ ಬಾರಿ ಉತ್ಪಾದಕತೆ ಕಡಿಮೆ. 17 ಸಲ ಸದನ ನಡೆದರೂ, ಕೇವಲ ಶೇ. 28ರಷ್ಟು ಮಾತ್ರ ಉತ್ಪಾದಕತೆ ಕಂಡುಬಂದಿದೆ. ಆದ್ರೆ, ಈ ಹಿಂದಿನ ಒಟ್ಟಾರೆ ಐದು ಅಧಿವೇಶನಗಳಲ್ಲಿ ಕಂಡುಬಂದ ಉತ್ಪಾದಕತಾ ಪ್ರಮಾಣ ಶೇ. 95 ರಷ್ಟು. ಈ ಸಲದ ಒಟ್ಟು ನಿಗದಿಯಾಗಿದ್ದ 97 ಗಂಟೆ 30 ನಿಮಿಷ ಅವಧಿಯಲ್ಲಿ ರಾಜ್ಯಸಭೆ ನಡೆದಿದ್ದು ಕೇವಲ 28 ಗಂಟೆ. ಅಂದ್ರೆ ಸುಮಾರು 69 ಗಂಟೆ 30 ನಿಮಿಷ ಕಾಲದ ಅಧಿವೇಶನ ಪ್ರತಿಪಕ್ಷಗಳ ಕೋಲಾ ಹಲಕ್ಕೆ ಆಹುತಿಯಾಯಿತು.

    ಇನ್ನು, ಅಮೂಲ್ಯ ಕಲಾಪಗಳನ್ನ ಪ್ರತಿಪಕ್ಷಗಳ ಗದ್ದಲ ಬಲಿ ಪಡೆದ ಬಗ್ಗೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್​ನ ಸತ್ ಸಂಪ್ರದಾಯ ಪಾಲಿಸಬೇಕೆಂದು ಎಲ್ಲಾ ಸಂಸದರನ್ನೂ ಒತ್ತಾಯಿಸಿದ ಓಂ ಬಿರ್ಲಾ, ಸಂಸತ್​ನೊಳಗೆ ಘೋಷಣೆ ಕೂಗು ವುದು, ಬ್ಯಾನರ್ ಹಿಡಿಯುವುದು ಸಂಪ್ರದಾಯವಲ್ಲ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸದರು ಬಾವಿಯೊಳಗೆ ಬಂದು ಗೊಂದಲ ಮೂಡಿಸೋ ಬದಲು ಕೂತ ಸ್ಥಾನಗಳಿಂದಲೇ ತಂತಮ್ಮ ಅಬಿಪ್ರಾಯ ಮಂಡಿಸಬಹುದಿತ್ತು ಎಂದು ಓಂ ಬಿರ್ಲಾ ನುಡಿದಿದ್ದಾರೆ. ಅಲ್ಲದೇ. ಪ್ರಸಕ್ತ ಕಲಾಪದ ವೇಳೆ 13 ಮಸೂದೆಗಳನ್ನ ಮಂಡಿಸಲಾದ್ರೆ, 20 ಮಸೂದೆಗಳ ಅಂಗೀಕರಿಸಲಾಗಿದೆ ಎಂದು ಸಭಾಧ್ಯಕ್ಷರು ಮಾಹಿತಿ ನೀಡಿದ್ದಾರೆ.

    ಸಮನ್ವಯತೆಗೆ ಎಚ್​ಡಿ ದೇವೇಗೌಡರ ಕಿವಿಮಾತು
    ಇನ್ನ, ಸುಲಲಿತವಾಗಿ ನಡೆಯಬೇಕಿದ್ದ ಲೋಕಸಭಾ ಹಾಗೂ ರಾಜ್ಯಸಭಾ ಕಲಾಪ ಪ್ರತಿಪಕ್ಷಗಳ ಗದ್ದಲಕ್ಕೆ ಬಲಿಯಾದ ಬಗ್ಗೆ ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ಆಡಳಿತ ಹಾಘೂ ಪ್ರತಿಪಕ್ಷಗಳ ನಡುವಿನ ಕಲಹದಿಂದ ಕಲಾಪ ನಷ್ಟವಾಗಿದ್ದು, ಇದರ ಜತೆಗೆ ಕೋಲಾಹಲದಿಂದ ಸದನದ ಪಾವಿತ್ರ್ಯಕ್ಕೆ ಧಕ್ಕೆ ಆಗಿದ್ದು ನೋವು ತಂದಿದೆ ಎಂದು ದೇವೇಗೌಡರು ಅಳಲು ತೋಡಿಕೊಂಡಿದ್ದಾರೆ. ಎರಡೂ ಕಡೆಯ ನಾಯಕರು ಈಗ್ಲಾದರೂ ಕೂತು ಚರ್ಚೆ ನಡೆಸೋ ಮೂಲಕ ಒಗ್ಗಟ್ಟಾಗಿ ಮುಂದಿನ ಕಲಾಪ ನಡೆಸೋ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ಎಚ್​ಡಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

    ಒಟ್ಟಾರೆ, ದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನ, ಕಾನೂನುಗಳನ್ನ ಜಾರಿಗೊಳಿಸೋ ನಿಟ್ಟಿನಲ್ಲಿ ಸಂಸತ್ ಅಧಿವೇಶನ ಪೂರಕ. ಇಲ್ಲಿ ನಾನಾ ಕಾಯ್ದೆಗಳ ಮಂಡನೆ ಮೂಲಕ ದೇಶದ ಪ್ರಗತಿಯತ್ತ ನೋಟ ಹರಿಸಬೇಕಾಗಿದ್ದು ಎಲ್ಲರ ಕರ್ತವ್ಯ. ಆದ್ರೆ, ಈ ಬಾರಿ ಸಂಸತ್ ಅಧಿವೇ ಶನ ಮಾತ್ರ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಿತ್ತು. ಮೊದಲೇ ಕೋವಿಡ್ ಹೊಡೆತದಿಂದ ತತ್ತರಿಸಿರೋ ಇಡೀ ದೇಶ, ಕರೊನಾ ಹೆಮ್ಮಾರಿ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳೋದು ಹೇಗೆ? 3ನೇ ಸಂಭಾವ್ಯ ಅಲೆಗೆ ಕಡಿವಾಣ ಹಾಕೋ ಪರಿ ಏನು ಅಂತಾ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿದೆ. ಇಂಥಾ ಸಮಯದಲ್ಲಿ ಸದನದಲ್ಲಿ ಈ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷಗಳು ಒಗ್ಗೂಡಿ ಕಾರ್ಯಯೋಜನೆ ರೂಪಿಸೋ ಬದಲು ಆಗಿದ್ದು ಪಕ್ಷಗಳ ಸ್ವಾರ್ಥ ದರ್ಶನ.!

    23 ದಿನಗಳ ಕಾಲ ಸದನದ ಒಳಗೆ ನಡೆದ ಸಂಸದರ ಕಲಹ ಇದೀಗ ಸಂಸತ್ ಹೊರಗಡೆಯೂ ಕಂಟಿನ್ಯೂ ಆಗಿದೆ. ಒಂದೆಡೆ, ಸದನದಲ್ಲಿ ಪ್ರತಿಪಕ್ಷ ಸದಸ್ಯರ ರೋಷಾವೇಷದ ವಿಡಿಯೋ ದೃಶ್ಯಾವಳಿಗಳು ಬಯಲಾದ ಬೆನ್ನಲ್ಲೇ ಕೇಂದ್ರ ಸಚಿವರ ತಂಡ ವಿರೋಧಪಕ್ಷಗಳ ವಿರುದ್ಧ ವಾಗ್ವಾಸ್ತ್ರ ಪ್ರಯೋಗಿಸಿದೆ. ಇನ್ನೊಂದೆಡೆ, ಸದನದ ಕಲಾಪಗಳಿಗೆ ಎಳ್ಳುನೀರು ಬಿಟ್ಟ ಪ್ರತಿಪಕ್ಷಗಳೇ ಇದೀಗ ಸದನ ಮುಂದೂಡಿಕೆ ವಿರುದ್ಧ ಪ್ರತಿಭಟನೆ ನಡೆಸಿವೆ.

    ಹಸ್ತಪಡೆ ವಿರುದ್ಧ ಕೇಂದ್ರ ಸಚಿವರ ವಾಕ್ಪ್ರಹಾರ
    ದೇಶದ ಪಾಲಿಗೆ ನಿರ್ಣಾಯಕವಾಗಬೇಕಿದ್ದ ಆರನೇ ಸಂಸತ್ ಅಧಿವೇಶನಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ನಿಗದಿತ ಸಮಯಕ್ಕೂ 2 ದಿನ ಮುನ್ನವೇ ಅನಿರ್ದಿಷ್ಟಾವಧಿ ಮುಂದೂಡಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಪ್ರತಿಪಕ್ಷಗಳ ಕ್ರಮವನ್ನ ಕೇಂದ್ರದ ಸಚಿವರು ಬಲವಾಗಿ ಖಂಡಿಸಿ ದ್ದಾರೆ. ಜಂಟಿ ಸುದ್ದಿಗೋಷ್ಟಿ ನಡೆಸಿದ ಕೇಂದ್ರ ಸಚಿವರ ತಂಡ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಲಾಪಗಳಿಗೆ ಅಡ್ಡಿಯುಂಟು ಮಾಡೋ ಏಕೈಕ ಉದ್ದೇಶದಿಂದ ವೃಥಾ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದರ ಬೆನ್ನಲ್ಲೇ ಲೋಕಸಭಾ ಹಾಗೂ ರಾಜ್ಯಸಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷ ಸದಸ್ಯರು, ಇದೀಗ ಸದನದ ಹೊರಗಡೆಯೂ ಇದನ್ನೇ ಮುಂದುವರೆಸಿದ್ದಾರೆ. ಸಂಸತ್ ಅಧಿವೇಶನವನ್ನ ಮೊಟಕು ಗೊಳಿಸಿದ ಕ್ರಮ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಉದ್ದೇಶಿತ ಮೂರು ಕೃಷಿ ಕಾಯ್ದೆ ಹಿಂಪಡೆತ ಹಾಗೂ ಮುಂಗಾರು ಅಧಿವೇಶನ ಮೊಟಕುಗೊಳಿಸಿದ ಕ್ರಮ ವಿರುದ್ಧ ಸಿಡಿದೆದ್ದ ಪ್ರತಿಪಕ್ಷ ಸದಸ್ಯರು ಸಂಸತ್​ನಿಂದ ವಿಜಯ್ ಚೌಕ್ ​​ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ದೇಶದ ಶೇ. 60ರಷ್ಟು ಜನರ ದನಿಯನ್ನ ಹತ್ತಿಕ್ಕ ಲಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

    ಒಟ್ಟಾರೆ, ಅತ್ಯಮೂಲ್ಯ ಸಂಸತ್ ಕಲಾಪವನ್ನ ಗುಳುಂ ಮಾಡೋ ಮೂಲಕ ಪ್ರತಿಪಕ್ಷಗಳು ಮೋದಿ ಸರ್ಕಾರ ಏನೇ ಮಾಡಿದರೂ ವಿರೋಧಿಸಲೇಬೇಕು ಅನ್ನೋ ನೀತಿ ಪ್ರದರ್ಶಿಸಿವೆ. ರಾಜ್ಯಸಭೆಯಲ್ಲಿ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿ ಅಸಹನೀಯವಾಗಿ ವರ್ತಿತಿಸಿದ್ದಾರೆ ಪ್ರತಿಪಕ್ಷ ಸದಸ್ಯರು. ಮಾಡೋದೆಲ್ಲವನ್ನೂ ಮಾಡಿದ ನಂತರ, ಬಿಜೆಪಿಯವರೇ ಹಲ್ಲೆ ಮಾಡಿದರು ಅಂತಾ ಬೊಬ್ಬೆ ಹೊಡೆದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ಸದಸ್ಯರ ಬಂಡವಾಳವನ್ನ ಆನಂತರ ಸಿಕ್ಕ ವಿಡಿಯೋ ದೃಶ್ಯಾವಳಿಗಳು ಬಯಲುಮಾಡಿವೆ. ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ ಅಂದ ಅನ್ನುವಂತೆ ಪ್ರತಿಪಕ್ಷಗಳು ಮಾತ್ರ ಮತ್ತೆ ಪ್ರತಿಭಟನೆ ಮುಂದುವರೆಸಿವೆ. ದೇಶದ ಜನ ಎಲ್ಲವನ್ನೂ ಅರ್ಥಮಾಡಿಕೊಳ್ಳು ತ್ತಾರೆ ಎಂಬ ಸತ್ಯ ಅರಿತರೇ ಇಂಥಾ ಸ್ಥಿತಿ ಉದ್ಭವಿಸೋದಿಲ್ಲ.

    ದೇಶದ ಇತಿಹಾಸದಲ್ಲೇ ಅಸಹ್ಯಕರ ಸನ್ನಿವೇಶಗಳಿಗೆ ಈ ಸಲ ರಾಜ್ಯಸಭೆ ಸಾಕ್ಷಿಯಾಗಿದೆ. ಖುದ್ದು ಸಭಾಪತಿಗಳೇ ಗೊಳೋ ಅಂತಾ ಕಣ್ಣೀರು ಹಾಕುವಂತಹ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ ರಾಜ್ಯಸಭೆ. ಸಕಾರಾತ್ಮಕ ಚರ್ಚೆಗಳ ಮೂಲಕ ಪ್ರಜಾಪ್ರುಭುತ್ವಕ್ಕೆ ಬುನಾದಿ ಹಾಕಬೇಕಾದ ಪ್ರಗತಿಪರರ, ಸುಶಿಕ್ಷಿತರ ಅಖಾಡ, ಅಕ್ಷರಶಃ ಒಲಿಂಪಿಕ್ಸ್ ಕುಸ್ತಿ ಅಖಾಡವಾಗಿ ಮಾರ್ಪಟ್ಟಿದ್ದು ಪ್ರಜಾಸತ್ತೆಯ ಅಣಕವೇ ಸರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts