More

    ಖ್ಯಾತ ಉದ್ಯಮಿ, ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಶಾಂತಲಿಂಗಪ್ಪ ಎಸ್. ಪಾಟೀಲ ಕಡಗಂಚಿ ಇನ್ನಿಲ್ಲ

    ಕಲಬುರಗಿ: ನಾಡಿನ ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ ಎಸ್.ಎಸ್.ಪಾಟೀಲ್ (ಶಾಂತಲಿಂಗಪ್ಪ ಶರಣಬಸಪ್ಪ) ಕಡಗಂಚಿ (84) ಅವರು ಮಂಗಳವಾರ ತಡರಾತ್ರಿ ನಿಧನ ಹೊಂದಿದರು.

    ಪತ್ನಿ ಸರೋಜನಿ ಎಸ್.ಪಾಟೀಲ್, ಪುತ್ರರಾದ ಲಿಂಗರಾಜ ಎಸ್.ಪಾಟೀಲ್, ಸಿದ್ದಲಿಂಗ ಎಸ್.ಪಾಟೀಲ್ ಹಾಗೂ ಪುತ್ರಿಯರಾದ ಶೋಭಾ ಎಸ್.ಬೆಂಬಳಗಿ, ಶೈಲಜಾ ವಿ.ಜಿ, ನಂದಾ ಪಿ.ಪಾಟೀಲ್ ಅಗಲಿದ್ದಾರೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದವರಾದ ಎಸ್.ಎಸ್.ಪಾಟೀಲ್ ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಉದ್ಯಮ ಸ್ಥಾಪಿಸಿ, ಕಲ್ಯಾಣ ಕರ್ನಾಟಕದ ಪ್ರಗತಿಗೆ ಕೊಡುಗೆ ನೀಡಿದ್ದರು. ಕಲಬುರಗಿಯ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್​ ಕಾಮರ್ಸ್​ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸಿದ್ದರು.

    ಎಫ್​ಕೆಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉತ್ತರ ಕರ್ನಾಟಕ ಭಾಗದ ಏಕೈಕ ಉದ್ಯಮಿ ಎನಿಸಿಕೊಂಡಿದ್ದರು. ಪಾಟೀಲರ ಕೈಗಾರಿಕೆಗಳು ಕರ್ನಾಟಕ ಅಲ್ಲದೆ ಮಹಾರಾಷ್ಟ್ರ, ಛತ್ತಿಸ್​ಗಢ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಸ್ಥಾಪಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಸ್ಟೀಲ್ ವೈಯರ್, ರೈಲ್ವೆ ಸ್ಲೀಪರ್ ಘಟಕಗಳನ್ನು ಸ್ಥಾಪಿಸಿದ್ದರು. ಹೈದರಾಬಾದ್​ನಲ್ಲಿ ಸಂಗಮ್ ಹೆಲ್ತ್ ಕೇರ್ ಕೈಗಾರಿಕೆ ಮೂಲಕ ಹಲವು ಔಷಧ ಮತ್ತು ಸಲಕರಣೆಗಳನ್ನು ಉತ್ಪಾದಿಸಿ ಆರೋಗ್ಯ ಕ್ಷೇತ್ರಕ್ಕೆ ನೆರವಾಗಿದ್ದರು.

    ಪಾಟೀಲರು ಕಲಬುರಗಿಯಲ್ಲಿ ಸಂಗಮ ತ್ರಿವೇಣಿ ಚಿತ್ರ ಮಂದಿರ ಸ್ಥಾಪಿಸುವ ಮೂಲಕ ಸಿನಿಮಾರ ರಂಗಕ್ಕೆ ಕಾಲಿರಿಸಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ವಿತರಕರಾಗಿಯೂ ಕೆಲಸ ಮಾಡಿದ್ದಾರೆ.

    ಪಾಟೀಲರ ನಿಧನದಿಂದ ಹೈದರಾಬಾದ್ ಕರ್ನಾಟಕದ ಉದ್ಯಮ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಇವರ ಸೇವೆ ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಹಲವು ಪ್ರಶಸ್ತಿ ಲಭಿಸಿವೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದ ಇವರು ಕಲಬುರಗಿ ವಿಮಾನ ನಿಲ್ದಾಣ ಬಳಿ ವೃದ್ಧಾಶ್ರಮ ಸ್ಥಾಪಿಸಲು ಎರಡು ಎಕರೆ ಜಮೀನು ನೀಡಿದ್ದರು. ಅಲ್ಲದೆ ಸಮಾಜದ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡುತ್ತಿದ್ದರು.

    ಅಂತ್ಯಕ್ರಿಯೆ ಬುಧವಾರ ಸಂಜೆ 4ಕ್ಕೆ ಹುಮನಾಬಾದ್ ರಸ್ತೆಯ ಕೆಎಂಎಫ್ ಡೇರಿ ಎದುರಿನ ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಆವರಣದಲ್ಲಿ ನೆರವೇರಲಿದೆ. ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಉದ್ಯಮಿ ಡಾ.ಬಿ.ಜಿ. ಪಾಟೀಲ್, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಎಚ್​ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಉದ್ಯಮಿ ರಾಜಾ ಭೀಮಳ್ಳಿ, ಡಾ.ಎಸ್.ಬಿ. ಕಾಮರೆಡ್ಡಿ ಸೇರಿ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

    ಚಂದನವನದ ಬಿಂಬ; ಸೆ. 2ರಿಂದ 4ರ ವರೆಗೆ ಛಾಯಾಚಿತ್ರ ಪ್ರದರ್ಶನ

    ನಮ್ಮ ಪೀಳಿಗೆಗೆ ಅವರೇ ದೇವರು; ಲಕ್ಕಿಮ್ಯಾನ್ ಅಪ್ಪು ಕುರಿತು ರೋಶಿನಿ..

    ಜೈಲರ್ ಪ್ರಾರಂಭ; ರಜನಿಕಾಂತ್ ಮೊದಲ ಲುಕ್ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts