More

    ಮಧ್ಯಪ್ರದೇಶದ ಇಂಜಿನಿಯರಿಂಗ್​ ಕೋರ್ಸ್​ನಲ್ಲಿ ರಾಮಾಯಣ-ಮಹಾಭಾರತ: ವಿವಾದ ಕಿಡಿಹೊತ್ತಿಸಿದ ಸರ್ಕಾರದ ನಿಲುವು

    ಭೋಪಾಲ್: ಇನ್ಮುಂದೆ ಮಧ್ಯಪ್ರದೇಶದ ಕಾಲೇಜುಗಳಲ್ಲಿ ರಾಮಾಯಣ ಮತ್ತು ಮಹಾಭಾರತವು ಪಠ್ಯಕ್ರಮದ ಭಾಗವಾಗಲಿವೆ. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತುಳಸಿದಾಸ್​ ಅವರ “ರಾಮಚರಿತಮಾನಸ” ಹಾಗೂ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ರಾಮಸೇತು ಬಗ್ಗೆ ಕಲಿಯಬೇಕಾಗಿದೆ. ಮಧ್ಯಪ್ರದೇಶದ ಪರಿಷ್ಕೃತ ಪಠ್ಯಕ್ರಮದಲ್ಲಿ ಇವು ಅಳವಡಿಸಲಾಗಿದೆ. ಇದರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು ಹಿಂದಿಯಲ್ಲಿ ಕಲಿಯಲು ಸಹ ಅವಕಾಶ ಮಾಡಿಕೊಡಲಾಗಿದೆ.

    ಆದಷ್ಟು ಬೇಗ ಸಮಿತಿಯೊಂದನ್ನು ರಚನೆ ಮಾಡಿ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಕಲಿಸಲು ತಯಾರಿ ನಡೆಸಲಾಗುವುದು. ಭವಿಷ್ಯದಲ್ಲಿ ನಾವು ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣನ್ನು ನೀಡಲಿದ್ದೇವೆ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ಹೇಳಿದರು.

    ಉನ್ನತ ಶಿಕ್ಷಣಕ್ಕಾಗಿ ಪಠ್ಯಕ್ರಮ ಸಮಿತಿಯ ಶಿಫಾರಸಿನ ಮೇರೆಗೆ ರಾಮಚರಿತಮಾನಸ ತತ್ವವನ್ನು ಪ್ರಥಮ ವರ್ಷದ ಬಿಎ ವಿದ್ಯಾರ್ಥಿಗಳಿಗೆ 2021-22ರ ಶೈಕ್ಷಣಿಕ ವರ್ಷದಲ್ಲಿ ಐಚ್ಛಿಕ ವಿಷಯವನ್ನಾಗಿ ಪರಿಚಯಿಸಲಾಗಿದೆ ಎಂದು ಸಾರಂಗ್​ ಹೇಳಿದರು. ಭಾರತೀಯ ಸಂಸ್ಕೃತಿ, ಆಧ್ಯಾತ್ಮ ಮತ್ತು ಧರ್ಮವನ್ನು ಒಳಗೊಂಡ ನೂರು ಅಂಕಗಳ ಪ್ರಶ್ನೆಗಳನ್ನು ಇದು ಹೊಂದಿರಲಿದೆ. ಅಲ್ಲದೆ, ನಾಲ್ಕು ವೇದಗಳು, ಉಪನಿಷತ್​ಗಳು ಮತ್ತು ಪುರಾಣಗಳು ಹಾಗೂ ರಾಮಾಯಣ ಮತ್ತು ರಾಮಚರಿತಮಾನಸ ಹಾಗೂ ದೈವಿಕ ಅಸ್ತಿತ್ವದ ಅವತಾರದ ವಿಷಯಗಳು ಪ್ರಶ್ನೆ ಪತ್ರಿಕೆಯಲ್ಲಿ ಅಡಕವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಇಂಗ್ಲಿಷ್‌ ಫೌಂಡೇಶನ್ ಕೋರ್ಸ್‌ನಲ್ಲಿ, ಸಿ ರಾಜಗೋಪಾಲ್‌ಚಾರಿ ಅವರ ಮಹಾಭಾರತದ ಮುನ್ನುಡಿಯನ್ನು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಸಾಮರ್ಥ್ಯ ಮತ್ತು ಮಾನವೀಯ ವರ್ತನೆ ಸೇರಿದಂತೆ ವ್ಯಕ್ತಿತ್ವ ವಿಕಸನದ ಹಲವು ಮಜಲುಗಳ ಮೇಲೆ ವಿದ್ಯಾರ್ಥಿಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದಿದ್ದಾರೆ.

    ಇದಿಷ್ಟೇ ಅಲ್ಲದೆ, ರಾಷ್ಟ್ರೀಯ ಸ್ವಯಂ ಸೇವಕ್​ ಸಂಘದ ಸಂಸ್ಥಾಪಕ ಡಾ. ಕೆ.ಬಿ. ಹೆಡ್ಗೆವಾರ್​, ಭಾರತೀಯ ಜನ ಸಂಘ್​ ಮುಖ್ಯಸ್ಥ ದೀನ ದಯಾಳ್​ ಉಪಾಧ್ಯಾಯ ಮತ್ತು ಡಾ. ಬಿ.ಆರ್​. ಅಂಬೇಡ್ಕರ್​ ಸೇರಿದಂತೆ ಇತರೆ ನಾಯಕರ ಜೀವನ ಚರಿತ್ರೆಯನ್ನು ಮೆಡಿಸಿನ್​ನ ಮೊದಲ ವರ್ಷದ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲೂ ಸೇರಿಸುವ ಪ್ರಸ್ತಾವನೆಯೂ ಇದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ತುಂಬಲು ಸಹಕಾರಿಯಾಗಲಿದೆ ಎಂದು ಸಾರಂಗ ತಿಳಿಸಿದರು.

    ಮಧ್ಯ ಪ್ರದೇಶ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಮಾತನಾಡಿ, ಈ ಬದಲಾವಣೆಗಳು “ನಮ್ಮ ಭವ್ಯವಾದ ಭೂತಕಾಲವನ್ನು ಮುಂಚೂಣಿಗೆ ತರಲು” ಸಹಕಾರಿಯಾಗಲಿದೆ ಎಂದು ಹೇಳಿದರು. ವಿದ್ವಾಂಸರ ಶಿಫಾರಸಿನ ಮೇರೆಗೆ ಈ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವ ಮೂಲಕ ಶಿಕ್ಷಣದ ಕೇಸರೀಕರಣಗೊಳಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದರು. ರಾಮಸೇತುವೆಯನ್ನು ಮಿಲಿಯನ್ಸ್​ ವರ್ಷಗಳ ಹಿಂದೆ ಮಾನವನೇ ನಿರ್ಮಾಣ ಮಾಡಿದ್ದಾನೆಂದು ನಾಸಾ ಅಧ್ಯಯನವು ಕೂಡ ಹೇಳಿದೆ ಎಂದು ಮೋಹನ್​ ಯಾದವ್​ ತಿಳಿಸಿದರು.

    ಕಾಂಗ್ರೆಸ್ ನಾಯಕ ಆರಿಫ್ ಮಸೂದ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರವು ರಾಮಚರಿತಮಾನ ಜತೆಗೆ ಗುರು ಗ್ರಂಥ ಸಾಹಿಬ್, ಕುರಾನ್ ಮತ್ತು ಬೈಬಲ್ ಅನ್ನು ಸೇರಿಸಿದ್ದರೆ ಉತ್ತಮ ಎಂದು ಹೇಳಿದರು. ಮಕ್ಕಳು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಾರೆ ಮತ್ತು ದೇಶದ ಸಂವಿಧಾನದ ಚೈತನ್ಯವನ್ನು ಸಹ ಪೂರೈಸಲಾಗುತ್ತದೆ ಎಂದರು. (ಏಜೆನ್ಸೀಸ್​)

    ಇರಲಾರದೆ ಇರುವೆ ಬಿಟ್ಟುಕೊಂಡ ಕತೆಯಿದು! ತಳಕು ಬಳಕು​ ವಿಡಿಯೋಗಳಿಗೆ ಮರುಳಾದ್ರೆ ಆಗೋದು ಹೀಗೆ

    ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್​ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!

    ನೀನೇಕೆ ಬಿಳಿಕೂದಲು ಮರೆಮಾಚುವುದಿಲ್ಲ? ತಂದೆಯ ಪ್ರಶ್ನೆಗೆ ಸಮೀರಾ ರೆಡ್ಡಿ ಕೊಟ್ಟ ಉತ್ತರಕ್ಕೆ ಎಲ್ಲರೂ ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts