More

    ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ: PIL​ ವಿಚಾರಣೆ ಬಳಿಕ ಸುಪ್ರೀಂಕೋರ್ಟ್​ನಿಂದ ಮಹತ್ವದ ಆದೇಶ

    ನವದೆಹಲಿ: ಪ್ರಧಾನಿ ಮೋದಿ ಭೇಟಿಯ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿದೆ ಎಂದು ಪಂಜಾಬ್​ ಸರ್ಕಾರದ ವಿರುದ್ಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್​)ಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪ್ರಧಾನಿ ಮೋದಿ ಪ್ರಯಾಣದ ದಾಖಲೆಗಳನ್ನು ಸುರಕ್ಷಿತಗೊಳಿಸಲು ಶುಕ್ರವಾರ ನಿರ್ದೇಶಿಸಿದೆ.

    ಮೊನ್ನೆ (ಜ.5) ಪಂಜಾಬ್​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಪರಿಣಾಮ ಫಿರೋಜ್​ಪುರ ಫ್ಲೈಓವರ್​ನಲ್ಲಿ 20 ನಿಮಿಷ ಟ್ರಾಫಿಕ್​ನಲ್ಲಿ ಸಿಲುಕಿದ್ದ ಪ್ರಧಾನಿ, ಅಲ್ಲಿಂದ ವಾಪಸ್​ ಆಗಿದ್ದು, ಫಿರೋಜ್​ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ರದ್ದಾಯಿತು. ಈ ಭದ್ರತಾ ವೈಫಲ್ಯ ಕುರಿತು ಭಟಿಂಡಾ ಏರ್​ಪೋರ್ಟ್​ನ ಅಧಿಕಾರಿಗಳಿಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ, ನನ್ನನ್ನು ಜೀವಂತವಾಗಿ ಕಳಿಸಿದ್ದಕ್ಕೆ ಪಂಜಾಬ್​ ಸಿಎಂಗೆ ಧನ್ಯವಾದ ತಿಳಿಸಿ ಎಂದಿದ್ದರು.

    ಇದಾದ ಬಳಿಕ ಪಂಜಾಬ್​ ಸರ್ಕಾರದ ಭದ್ರತಾ ವೈಫಲ್ಯ ವಿರೋಧಿಸಿ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ತುರ್ತು ವಿಚಾರಣೆಯನ್ನು ಕೋರಿ ಸುಪ್ರೀಂಕೋರ್ಟ್​ಗೆ ನಿನ್ನೆ (ಜ.6) ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಪ್ರಧಾನಿ ಮೋದಿ ಪ್ರಯಾಣದ ದಾಖಲೆಗಳನ್ನು ಸುರಕ್ಷಿತವಾಗಿ ಇಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಂಜಾಬ್​ ಪೊಲೀಸ್​, ವಿಶೇಷ ರಕ್ಷಣಾ ಪಡೆ (ಎಸ್​ಪಿಜಿ) ಮತ್ತು ಇತರೆ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಅಗತ್ಯ ನೆರವು ಒದಗಿಸುವ ಮೂಲಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್​ಗೆ ಸಹಕಾರ ನೀಡಿ ಎಂದು ಕೋರ್ಟ್​ ತಿಳಿಸಿದೆ.

    ಈ ರೀತಿಯ ಭದ್ರತಾ ಲೋಪವು ವಿರಾಳಾತಿ ವಿರಳ ಪ್ರಕರಣವಾಗಿದೆ. ಇದು ಸಂಭಾವ್ಯ ಅಂತಾರಾಷ್ಟ್ರೀಯ ಮುಜುಗರವನ್ನು ಉಂಟುಮಾಡಬಹುದು ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಕೋರ್ಟ್​ಗೆ ತಿಳಿಸಿದರು. ಅಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಅರ್ಜಿದಾರನ ಮನವಿಯನ್ನು ಮೆಹ್ತಾ ಬೆಂಬಲಿಸಿದರು.

    ಮೊನ್ನೆ ನಡೆದ ಘಟನೆ ಪ್ರಧಾನಿ ಭದ್ರತೆಯಲ್ಲಿ ಗಂಭೀರ ಪರಿಸ್ಥಿತಿಯನ್ನು ಹುಟ್ಟುಹಾಕಿದೆ ಎಂದು ಮೆಹ್ತಾ ಅವರು ಕಳೆದ ಬುಧವಾರ ಪಂಜಾಜ್​ಗೆ ಪ್ರಧಾನಿ ಮೋದಿ ಭೇಟಿ ಮತ್ತು ಭದ್ರತೆಗೆ ಸಂಬಂಧಿಸಿದ ದಾಖಲೆಗಳನ್ನು ಪಂಜಾಬ್​ ಸರ್ಕಾರದಿಂದ ಕೇಳುವಂತೆ ಸುಪ್ರೀಂಕೋರ್ಟ್‌ಗೆ ಒತ್ತಾಯಿಸಿದರು.

    ಭದ್ರತಾ ಲೋಪಕ್ಕೆ ಪಂಜಾಬ್​ ಸರ್ಕಾರ ಮತ್ತು ಅಲ್ಲಿನ ಪೊಲೀಸ್​ ಇಲಾಖೆಯೇ ಹೊಣೆಗಾರರು. ಗಡಿಯಾಚೆಗಿನ ಭಯೋತ್ಪಾದನೆಯ ಸಾಧ್ಯತೆಯು ಇದರಲ್ಲಿದೆ. ಇದು ತಪ್ಪಿಸಬೇಕಾದ ವಿಷಯವಾಗಿದೆ. ಪ್ರತಿಭಟನಾಕಾರರ ಜತೆಯಲ್ಲಿ ಪಂಜಾಬ್​ ಪೊಲೀಸರು ಟೀ ಕುಡಿಯುತ್ತಾ ಕುಳಿತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್​ ಸರ್ಕಾರ ತನಿಖೆ ಮಾಡುವುದಿಲ್ಲ. ಹೀಗಾಗಿ ತನಿಖೆಯನ್ನು ರಾಷ್ಟ್ರೀಯ ಸಂಸ್ಥೆಗಳಿಗೆ ವಹಿಸಬೇಕು ಎಂದು ಮೆಹ್ತಾ ಅವರು ತಮ್ಮ ವಾದವನ್ನು ಮಂಡಿಸಿದರು. (ಏಜೆನ್ಸೀಸ್​)

    ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ: ಪಂಜಾಬ್​ ಸರ್ಕಾರದ ವಿರುದ್ಧ ಪಿಐಎಲ್​ ಸಲ್ಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts