More

    ಮಾಂಸಾಹಾರಕ್ಕೆ ತಡೆ ಆರೋಪ: ಜೆಎನ್​ಯುನಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ

    ನವದೆಹಲಿ: ಶ್ರೀ ರಾಮ ನವಮಿ ದಿನದಂದು ಹಾಸ್ಟೇಲ್​ ಕ್ಯಾಂಟೀನ್​ನಲ್ಲಿ ಮಾಂಸಾಹಾರ ವಿತರಣೆ ಸಂಬಂಧ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದಲ್ಲಿ ಭಾನುವಾರ ನಡೆದಿದೆ.

    ಭಾನುವಾರ ಮಧ್ಯಾಹ್ನ 3.30ರ ಸಮಯದಲ್ಲಿ ಕಾವೇರಿ ಹಾಸ್ಟೆಲ್​ನಲ್ಲಿ ಈ ಘಟನೆ ನಡೆದಿದ್ದು, 6 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಹಾಸ್ಟೆಲ್​ನ ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಹಾಸ್ಟೆಲ್‌ನಲ್ಲಿ ಮಾಂಸಾಹಾರ ನೀಡದಂತೆ ಸಿಬ್ಬಂದಿಯನ್ನು ತಡೆದಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಆರೋಪಿಸಿದೆ.

    ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್​ಎಸ್​ಎಸ್​ನ ವಿದ್ಯಾರ್ಥಿ ಘಟಕ ಎಬಿವಿಪಿ, ಹಾಸ್ಟೆಲ್​ನಲ್ಲಿ ಆಯೋಜನೆ ಮಾಡಿದ್ದ ಪೂಜೆಯನ್ನು ತಡೆಯಲು ಎಡಪಂಥೀಯ ಸಂಘಟನೆಗಳ ಸದಸ್ಯರು ಯತ್ನಿಸಿದರು ಎಂದು ಹೇಳಿದೆ. ಎರಡು ಸಂಘಟನೆಗಳ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು, ಕಲ್ಲು ತೂರಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಎರಡು ಗುಂಪಿನ ಸದಸ್ಯರಿಗೂ ಗಾಯಗಳಾಗಿವೆ.

    ಇದಾದ ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಲಾಯಿತು. ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಹಿಂಸೆ ಇಲ್ಲ. ಪ್ರತಿಭಟನೆ ನಡೆಸಲಾಗಿದ್ದು, ಈಗ ಅಂತ್ಯಗೊಂಡಿದೆ. ವಿಶ್ವವಿದ್ಯಾಲಯದ ಮನವಿ ಮೇರೆಗೆ ಇಲ್ಲಿಗೆ ಬಂದಿದ್ದೇವೆ. ನಾವು ಶಾಂತಿಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ತಿಳಿಸಿದರು.

    ಎಬಿವಿಪಿ ಗದ್ದಲವನ್ನು ಸೃಷ್ಟಿಸಲು “ಭುಜಬಲ ಮತ್ತು ಗೂಂಡಾವಾದ” ವನ್ನು ಬಳಸಿದೆ ಎಂದು ಜೆಎನ್‌ಯುಎಸ್‌ಯು ಆರೋಪಿಸಿದೆ. ಊಟದ ಮೆನುವನ್ನು ಬದಲಾಯಿಸುವಂತೆ ಮತ್ತು ವಿದ್ಯಾರ್ಥಿಗಳಿಗೆ ಸಾಮಾನ್ಯ ಮಾಂಸಾಹಾರವನ್ನು ಹೊರಗಿಡುವಂತೆ ಸಮಿತಿಯ ಮೇಲೆ ಎಬಿವಿಪಿ ಸದಸ್ಯರು ಒತ್ತಾಯಿಸಿದರು ಮತ್ತು ಹಲ್ಲೆ ನಡೆಸಿದರು ಎಂದು ವಿದ್ಯಾರ್ಥಿ ಸಂಘಟನೆಯು ಹೇಳಿಕೆಯಲ್ಲಿ ತಿಳಿಸಿದೆ. ಜೆಎನ್‌ಯು ಮತ್ತು ಅದರ ಹಾಸ್ಟೆಲ್‌ಗಳು ಎಲ್ಲರಿಗೂ ಒಳಗೊಳ್ಳುವ ಸ್ಥಳಗಳಾಗಿದ್ದು, ಕೇಲವ ಒಂದು ನಿರ್ದಿಷ್ಟ ವಿಭಾಗವಲ್ಲ ಎಂದು ಜೆಎನ್‌ಯುಎಸ್‌ಯು ಹೇಳಿದೆ.

    ಆದರೆ, ಎಬಿವಿಪಿಯು ಜೆಎನ್‌ಯುಎಸ್‌ಯು ಆರೋಪಗಳನ್ನು ತಿರಸ್ಕರಿಸಿದೆ. ಕೆಲವು ಸಾಮಾನ್ಯ ವಿದ್ಯಾರ್ಥಿಗಳು ರಾಮ ನವಮಿಯ ಶುಭ ಸಂದರ್ಭದಲ್ಲಿ ಮಧ್ಯಾಹ್ನ 3:30 ಕ್ಕೆ ಕಾವೇರಿ ಹಾಸ್ಟೆಲ್‌ನಲ್ಲಿ ಪೂಜೆ ಮತ್ತು ಹವನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಪೂಜೆಯಲ್ಲಿ ಜೆಎನ್‌ಯುನ ಹೆಚ್ಚಿನ ಸಂಖ್ಯೆಯ ಸಾಮಾನ್ಯ ವಿದ್ಯಾರ್ಥಿಗಳು ಸೇರಿದ್ದರು. ಇದನ್ನು ನೋಡಿದ ಎಡಪಂಥೀಯರು ಸಹಿಸಲಾಗದೇ ಪೂಜೆಗೆ ಅಡ್ಡಿಪಡಿಸಿ ನಡೆಯದಂತೆ ತಡೆದರು. ಆಹಾರದ ಹಕ್ಕು ವಿಷಯದಲ್ಲಿ ಅವರು ಸುಳ್ಳು ದಂಗೆಯನ್ನು ಸೃಷ್ಟಿಸಿದ್ದಾರೆ ಎಂದು ಎಬಿವಿಪಿ ಪ್ರತ್ಯಾರೋಪ ಮಾಡಿದೆ.

    ಇಂದು (ಏ.10) ಮಧ್ಯಾಹ್ನ ಎಬಿವಿಪಿ ಸದಸ್ಯರು ಕ್ಯಾಂಪಸ್‌ನೊಳಗೆ ಮಾಂಸಾಹಾರ ಸೇವನೆಗೆ ಬಿಡಲಿಲ್ಲ ಎಂಬ ವಿಚಾರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹಾಸ್ಟೆಲ್​ ಮೆಸ್​ನಲ್ಲಿ ಮಾಂಸಾಹಾರವನ್ನು ತಯಾರಿಸಲಾಗುತ್ತದೆ. ಆದರೆ, ಎಬಿವಿಪಿ ಸದಸ್ಯರು ಇದನ್ನು ತಿನ್ನಲು ಬಿಡಲಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಾರಿಕಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ನೀವು ದ್ವೇಷಿಸಿದಷ್ಟೂ ಮೋದಿಯನ್ನು ಜನ ಪ್ರೀತಿಸುತ್ತಾರೆ!

    ಇಮ್ರಾನ್ ಔಟ್, ಶೆಹಬಾಜ್ ಹೊಸ ಕ್ಯಾಪ್ಟನ್: ಪಾಕಿಸ್ತಾನ ರಾಜಕೀಯ ನಾಟಕಕ್ಕೆ ತೆರೆ

    ಮಾರ್ಟಿನ್ ಆಗಮನಕ್ಕೆ ದಿನಾಂಕ ನಿಗದಿ; ಸೆ.30ಕ್ಕೆ 5 ಭಾಷೆಗಳಲ್ಲಿ ಧ್ರುವ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts