More

    ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆಯ ಈ ಕೆಲ್ಸ ನಿಜಕ್ಕೂ ಶ್ಲಾಘನೀಯ!

    ತಿರುವನಂತಪುರಂ: ಸುಳ್ಳು ಆರೋಪ ಹೊರಿಸಿ, ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ ಮಹಿಳಾ ಪೊಲೀಸ್​ ಇನ್ಸ್​ಪೆಕ್ಟರ್​ ವಿರುದ್ಧ ಕಾನೂನು ಹೋರಾಟ ನಡೆಸಿ, ಗೆಲುವು ಸಾಧಿಸಿದ್ದಲ್ಲದೆ, ಸರ್ಕಾರದಿಂದ ಸ್ವೀಕರಿಸುವ ಪರಿಹಾರದ ಹಣವನ್ನು ಎರಡು ಉತ್ತಮ ಕಾರ್ಯಗಳಿಗೆ ನೀಡುವ ನಿರ್ಧಾರದ ಮೂಲಕ 8 ವರ್ಷದ ಬಾಲಕಿ ಮತ್ತು ಆಕೆಯ ತಂದೆ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ.

    ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಮೊಬೈಲ್​ ಕಳ್ಳತನದ ಸುಳ್ಳು ಆರೋಪ ಹೊರಿಸಿ, ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಸಮರ್ಥಿಸಿಕೊಂಡ ಸರ್ಕಾರಕ್ಕೆ ಛೀಮಾರಿ ಹಾಕಿದ ಕೇರಳ ಹೈಕೋರ್ಟ್​, ಈ ಘಟನೆಯಿಂದ ಬಾಲಕಿಗೆ ಆಗಿರುವ ಮಾನಸಿಕ ಹಿಂಸೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆಕೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಡಿಯಲ್ಲಿ ಆಕೆಗೆ 1.5 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಕೋರ್ಟ್ ಬುಧವಾರ (ಡಿ.22)​ ಆದೇಶಿಸಿದೆ.

    ಪರಿಹಾರದ ಹಣವನ್ನು ಆದಿವಾಸಿ ಮಕ್ಕಳ ಸಬಲೀಕರಣ ಮತ್ತು ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ (ಸಿಎಂಡಿಆರ್​ಎಫ್​)ಗೆ ದೇಣಿಗೆ ನೀಡಿ, ಒಂದಿಷ್ಟು ಹಣವನ್ನು ಉಳಿಸಿಕೊಳ್ಳಲು ತಂದೆ-ಮಗಳು ನಿರ್ಧರಿಸಿದ್ದಾರೆ. ಕೋರ್ಟ್​ ನೀಡಿರುವ ಆದೇಶಕ್ಕೆ ಮೇಲ್ಮನವಿ ಸಲ್ಲಿಸದೆ, ಸರ್ಕಾರವೂ ಪರಿಹಾರದ ಹಣವನ್ನು ನೀಡಿದರೆ ಈ ಎರಡು ಉತ್ತಮ ಕಾರ್ಯಗಳಿಗೆ ಹಣ ನೀಡುವುದಾಗಿ ಸಂತ್ರಸ್ತ ಬಾಲಕಿಯ ತಂದೆ ಹೇಳಿದ್ದಾರೆ. ಒಂದು ಭಾಗದ ಹಣವನ್ನು ಸಿಎಂಡಿಆರ್​ಎಫ್​ಗೆ ಮತ್ತು ಎರಡನೇ ಭಾಗದ ಹಣವನ್ನು ಆದಿವಾಸಿ ಮಕ್ಕಳ ಸಬಲೀಕರಣಕ್ಕೆ ಹಾಗೂ ಮೂರನೇ ಭಾಗವನ್ನು ಮಗಳ ಏಳಿಗೆಗಾಗಿ ಬಳಸಿಕೊಳ್ಳುತ್ತೇನೆಂದು ಬಾಲಕಿಯ ತಂದೆ ತಿಳಿಸಿದ್ದಾರೆ.

    ಬುಧವಾರ ತೀರ್ಪು ನೀಡಿದ್ದ ನ್ಯಾಯಮೂರ್ತಿ ದೇವನ್​ ರಾಮಚಂದ್ರನ್​ ಕಾನೂನು ಹೋರಾಟಕ್ಕೆ ಖರ್ಚಾದ 25 ಸಾವಿರ ರೂ. ಹಣವನ್ನು ಸಹ ಪಾವತಿಸುವಂತೆ ಸರ್ಕಾರಕ್ಕೆ ಆದೇಶಿಸಿದ್ದರು. ಅಲ್ಲದೆ, ಬಾಲಕಿ ಹಾಗೂ ಆಕೆಯ ತಂದೆಯ ವಿಚಾರದಲ್ಲಿ ಬೇಜವಬ್ದಾರಿಯುತವಾಗಿ ನಡೆದುಕೊಂಡು ಮಹಿಳಾ ಪೊಲೀಸ್​ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಶಿಸ್ತು ಕ್ರಮ ಆರಂಭವಾಗಿ ಮುಗಿಯುವವರೆಗೂ ಅಧಿಕಾರಿಯನ್ನು ಕರ್ತವ್ಯದಿಂದ ಹೊರಗಿಡಿ ಮತ್ತು ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ಅವರಿಗೆ ತರಬೇತಿ ನೀಡಿ ಎಂದು ಕೋರ್ಟ್​ ಹೇಳಿತ್ತು.

    ಘಟನೆಯ ಹಿನ್ನೆಲೆ ಏನು?
    ಆಗಸ್ಟ್​ 27ರಂದು ನಡೆದ ಘಟನೆ ಇದಾಗಿದೆ. 38 ವರ್ಷದ ಜಯಚಂದ್ರನ್, ತನ್ನ ಮಗಳೊಂದಿಗೆ ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್‌ನ ಚಲನೆಯನ್ನು ವೀಕ್ಷಿಸಲು ಇಲ್ಲಿನ ಅಟ್ಟಿಂಗಲ್ ಬಳಿಯ ಹೊರವಲಯದಲ್ಲಿರುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ವೇಳೆ ಕೇರಳ ಪೊಲೀಸ್​ ಇಲಾಖೆಯ ಪಿಂಕ್ ಪೊಲೀಸ್​ ಘಟಕದ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ ಅವರು​ ತಮ್ಮ ಮೊಬೈಲ್​ ಕಳೆದುಹೋಗಿತ್ತು. ಮೊಬೈಲ್​ ಕಳೆದು ಹೋಗುವ ಮುನ್ನ ರೆಜಿತಾ ಅವರಿದ್ದ ಗಸ್ತುವಾಹನ ಪಕ್ಕದಲ್ಲೇ ಜಯಚಂದ್ರನ್​ ಇದ್ದಿದ್ದರಿಂದ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಸ್ವಲ್ಪವೂ ಯೋಚಿಸದೇ ಮೊಬೈಲ್​ ಕದ್ದಿರುವುದು ಇವರೇ ಎಂದು ಭಾವಿಸಿದ ರೆಜಿತಾ, ಸಾರ್ವಜನಿಕರ ಎದುರಲ್ಲೇ ಬಾಲಕಿ ಮತ್ತು ಆಕೆಯ ತಂದೆಗೆ ಕೆಟ್ಟ ಪದಗಳಿಂದ ಅವಮಾನಿಸಿದರು. ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದರು. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದರು. ಇದಾದ ಬಳಿಕ ರೆಜಿತಾ ಅವರ ಮೊಬೈಲ್​ ಪೊಲೀಸ್​ ವಾಹನದಲ್ಲೇ ಪತ್ತೆಯಾಯಿತು. ಇದಿಷ್ಟು ಘಟನೆಯನ್ನು ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್​ ಸಹ ಆಗಿತ್ತು.

    ಇದಾದ ಬಳಿಕ ತಮಗಾದ ಅವಮಾನಕ್ಕೆ ನ್ಯಾಯ ಕೇಳಬೇಕೆಂದು ಆಗಸ್ಟ್​ 31ರಂದು ಪೊಲೀಸ್​ ಮುಖ್ಯಸ್ಥ ಅನಿಲ್​ ಕಾಂತ್​ ಬಳಿ ತೆರಳಿ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯಚಂದ್ರನ್​ ದೂರು ನೀಡಿದ್ದರು. ಸಾರ್ವಜನಿಕವಾಗಿ ನನ್ನ ಮಗಳನ್ನು ಅವಮಾನಿಸಿದ್ದರಿಂದ ಅವಳ ಆಘಾತದಿಂದ ಖಿನ್ನತೆಗೆ ಜಾರಿದ್ದಾಳೆ ಎಂದು ಜಯಚಂದ್ರನ್​ ದೂರು ನೀಡಿದ್ದರು. ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅನಿಲ್​ ಕಾಂತ್​ ಭರವಸೆ ನೀಡಿ, ತನಿಖೆಗೆ ಆದೇಶ ನೀಡಿದ್ದರು. ಆದರೆ, ರೆಜಿತಾ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಒಳ್ಳೆಯ ಜಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಾಕಷ್ಟು ಮನವಿ ಮತ್ತು ದೂರುಗಳನ್ನು ನೀಡಿದರೂ ಜಯಚಂದ್ರನ್​ ಕುಟುಂಬಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಕುಟುಂಬ, ರೆಜಿತಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

    ಕೋರ್ಟ್​ ತರಾಟೆ
    ಮಹಿಳಾ ಅಧಿಕಾರಿಯನ್ನು ಕೇರಳ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್​ ಮೆಟ್ಟಿಲೇರಿದ್ದ ಬಾಲಕಿ 50 ಲಕ್ಷ ರೂ. ಪರಿಹಾರ ಕೊಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಳು. ಹಿರಿಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಮಹಿಳಾ ಪೊಲೀಸ್​ ಮೇಲೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಬಾಗಿಲಿಗೆ ಬಂದಿದ್ದೇವೆ. ಸಾರ್ವಜನಿಕರ ಎದುರು ಅವಮಾನಿಸಿದ ಆಘಾತದಿಂದ ಖಿನ್ನತೆಗೆ ಜಾರಿ ಆಪ್ತ ಸಮಾಲೋಚನೆಯನ್ನು ಪಡೆದಿದ್ದೇನೆ. ಈಗಲೂ ಮಹಿಳಾ ಅಧಿಕಾರಿಯ ಚುಚ್ಚು ಮಾತುಗಳು ತೀವ್ರ ನೋವುಂಟು ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ತಿಳಿಸುವಂತೆ ಪೊಲೀಸ್​ ಇಲಾಖೆಗೆ ಕೋರಿತು ಮತ್ತು ಇದನ್ನು ‘ಸಣ್ಣ’ ಘಟನೆ ಎಂದು ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು.​ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.

    ಮಹಿಳಾ ಅಧಿಕಾರಿ ಆ ಚಿಕ್ಕ ಬಾಲಕಿಗೆ ಮನಸ್ಸಿಗೆ ನೋವುಂಟು ಮಾಡುವಂತೆ ನಡೆದುಕೊಂಡಿಲ್ಲ. ಅನುಚಿತವಾಗಿ ವರ್ತನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವರದಿ ನೀಡಿತು. ಅದಕ್ಕೆ ಸಾಕ್ಷಿ ಎಂಬಂತೆ ನಾಲ್ವರು ಸಾಕ್ಷಿಗಳನ್ನು ಕೂಡಾ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಹಾಗೆಯೇ ಆ ಮಗುವಿಗೆ ಪರಿಹಾರವನ್ನು ನಿರಾಕರಣೆ ಮಾಡಿತ್ತು. ಮಗು ಅವಮಾನದಿಂದ ಅಳಲಿಲ್ಲ. ಜನರು ಸೇರಿದ್ದನ್ನು ನೋಡಿ ಅತ್ತಿದೆ ಎಂದು ಸರ್ಕಾರವು ಸಮರ್ಥನೆ ನೀಡಿತ್ತು. ಆದರೆ, ಇದೀಗ ಸರ್ಕಾರಕ್ಕೆ ಛೀಮಾರಿ ಹಾಕಿರುವ ಕೋರ್ಟ್​ ಪರಿಹಾರ ನೀಡುವಂತೆಯು ಮತ್ತು ಮಹಿಳಾ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆಯೂ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

    ಹೆತ್ತವರು ಆಸ್ಪತ್ರೆಯಲ್ಲಿ, 3 ಮಕ್ಕಳು ನೆರೆಹೊರೆಯವರ ಆಸರೆಯಲ್ಲಿ… ಮನಕಲಕುತ್ತೆ ಇವರ ಕಣ್ಣೀರ ಕಥೆ

    ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ವಿಶ್ವದ ಟೆಕ್​ ದೈತ್ಯ ಗೂಗಲ್​ ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದ ಟಿಕ್​ಟಾಕ್​!

    ಹೊಸ ವರ್ಷಕ್ಕೆ ಬೆಲೆ ಬರೆ; ಗ್ರಾಹಕ ಸರಕು ಶೇ.4-10ರವರೆಗೆ ತುಟ್ಟಿ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts