More

    8ರ ಬಾಲಕಿ ಮೇಲೆ ಸುಳ್ಳು ಆರೋಪ ಹೊರಿಸಿ, ಅಮಾನಿಸಿದ ಮಹಿಳಾ ಪೊಲೀಸ್​ಗೆ ಶಾಕ್​ ಮೇಲೆ ಶಾಕ್​!

    ತಿರುವನಂತಪುರಂ: ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಮೊಬೈಲ್​ ಕಳ್ಳತನದ ಸುಳ್ಳು ಆರೋಪ ಹೊರಿಸಿ, ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ ಮಹಿಳಾ ಪೊಲೀಸ್​ ಅಧಿಕಾರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಈ ಹಿಂದೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಕೇರಳ ಹೈಕೋರ್ಟ್​ ಕ್ರಮ ತೆಗೆದುಕೊಳ್ಳುವಂತೆ ಶಾಕ್​ ನೀಡಿತ್ತು.

    ಇದೀಗ ಕೇರಳದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಜ್ಯ ಆಯೋಗವು ಮಹಿಳಾ ಅಧಿಕಾರಿಯ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೆ, ಮಕ್ಕಳ ಜತೆ ಹೇಗೆ ನಡೆದುಕೊಳ್ಳಬೇಕೆಂದು ಪೊಲೀಸ್​ ಅಧಿಕಾರಿಗಳಿಗೆ ತರಬೇತಿ ನೀಡುವಂತೆಯೂ ಆಯೋಗ ಆದೇಶಿಸಿದೆ.

    ಎಂಟು ವರ್ಷದ ಬಾಲಕಿ ಜತೆ ಮಹಿಳಾ ಅಧಿಕಾರಿ ನಡೆದುಕೊಂಡ ರೀತಿಯು ಬಾಲಕಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಈಗಾಗಲೇ ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಕ್ರಮ ತೃಪ್ತಿಕರವಲ್ಲ. ಒಳ್ಳೆಯ ಜಾಗಕ್ಕೆ ಅವರನ್ನು ವರ್ಗಾಯಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಆಯೋಗ ಒತ್ತಾಯಿಸಿದೆ.

    ಕೋರ್ಟ್​ ತರಾಟೆ
    ಇದಕ್ಕೂ ಮಹಿಳಾ ಅಧಿಕಾರಿಯನ್ನು ಕೇರಳ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್​ ಮೆಟ್ಟಿಲೇರಿದ್ದ ಬಾಲಕಿ 50 ಲಕ್ಷ ರೂ. ಪರಿಹಾರ ಕೊಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಳು. ಹಿರಿಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಮಹಿಳಾ ಪೊಲೀಸ್​ ಮೇಲೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಬಾಗಿಲಿಗೆ ಬಂದಿದ್ದೇವೆ. ಸಾರ್ವಜನಿಕರ ಎದುರು ಅವಮಾನಿಸಿದ ಆಘಾತದಿಂದ ಖಿನ್ನತೆಗೆ ಜಾರಿ ಆಪ್ತ ಸಮಾಲೋಚನೆಯನ್ನು ಪಡೆದಿದ್ದೇನೆ. ಈಗಲೂ ಮಹಿಳಾ ಅಧಿಕಾರಿಯ ಚುಚ್ಚು ಮಾತುಗಳು ತೀವ್ರ ನೋವುಂಟು ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ತಿಳಿಸುವಂತೆ ಪೊಲೀಸ್​ ಇಲಾಖೆಗೆ ಕೋರಿತು ಮತ್ತು ಇದನ್ನು ‘ಸಣ್ಣ’ ಘಟನೆ ಎಂದು ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು.​ ರೆಜಿತಾ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದ ನ್ಯಾಯಾಲಯ, ಪ್ರಕರಣವನ್ನು ನವೆಂಬರ್ 29ಕ್ಕೆ ಮುಂದೂಡಿದೆ.

    ಘಟನೆಯ ಹಿನ್ನೆಲೆ ಏನು?
    ಆಗಸ್ಟ್​ 27ರಂದು ನಡೆದ ಘಟನೆ ಇದಾಗಿದೆ. 38 ವರ್ಷದ ಜಯಚಂದ್ರನ್, ತನ್ನ ಮಗಳೊಂದಿಗೆ ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್‌ನ ಚಲನೆಯನ್ನು ವೀಕ್ಷಿಸಲು ಇಲ್ಲಿನ ಅಟ್ಟಿಂಗಲ್ ಬಳಿಯ ಹೊರವಲಯದಲ್ಲಿರುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ವೇಳೆ ಕೇರಳ ಪೊಲೀಸ್​ ಇಲಾಖೆಯ ಪಿಂಕ್ ಪೊಲೀಸ್​ ಘಟಕದ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ ಅವರು​ ತಮ್ಮ ಮೊಬೈಲ್​ ಕಳೆದುಹೋಗಿದೆ ಜಯಚಂದ್ರನ್​ ಅವರ ತಪಾಸಣೆ ನಡೆಸಿದರು. ಮೊಬೈಲ್​ ಕಳೆದು ಹೋಗುವ ಮುನ್ನ ರೆಜಿತಾ ಅವರಿದ್ದ ಗಸ್ತುವಾಹನ ಪಕ್ಕದಲ್ಲೇ ಜಯಚಂದ್ರನ್​ ಇದ್ದಿದ್ದರಿಂದ ಅವರ ಮೇಲೆ ಅನುಮಾನ ಮೂಡಿತ್ತು. ಮೊಬೈಲ್​ ಕದ್ದಿರುವುದು ಇವರೇ ಎಂದು ಭಾವಿಸಿದ ರೆಜಿತಾ, ಸಾರ್ವಜನಿಕರ ಎದುರಲ್ಲೇ ಬಾಲಕಿ ಮತ್ತು ಆಕೆಯ ತಂದೆಗೆ ಕೆಟ್ಟ ಪದಗಳಿಂದ ಅವಮಾನಿಸಿದರು. ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದರು. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದರು. ಇದಾದ ಬಳಿಕ ರೆಜಿತಾ ಅವರ ಮೊಬೈಲ್​ ಪೊಲೀಸ್​ ವಾಹನದಲ್ಲೇ ಪತ್ತೆಯಾಯಿತು. ಇದಿಷ್ಟು ಘಟನೆಯನ್ನು ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್​ ಸಹ ಆಗಿದೆ.

    ಇದಾದ ಬಳಿಕ ತಮಗಾದ ಅವಮಾನಕ್ಕೆ ನ್ಯಾಯ ಕೇಳಬೇಕೆಂದು ಆಗಸ್ಟ್​ 31ರಂದು ಪೊಲೀಸ್​ ಮುಖ್ಯಸ್ಥ ಅನಿಲ್​ ಕಾಂತ್​ ಬಳಿ ತೆರಳಿ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯಚಂದ್ರನ್​ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ನನ್ನ ಮಗಳನ್ನು ಅವಮಾನಿಸಿದ್ದರಿಂದ ಅವಳ ಆಘಾತದಿಂದ ಖಿನ್ನತೆಗೆ ಜಾರಿದ್ದಾಳೆ ಎಂದು ಜಯಚಂದ್ರನ್​ ದೂರು ನೀಡುತ್ತಾರೆ. ಸೂಕ್ರ ಕ್ರಮ ತೆಗೆದುಕೊಳ್ಳುವುದಾಗಿ ಅನಿಲ್​ ಕಾಂತ್​ ಭರವಸೆ ನೀಡುತ್ತಾರೆ. ಅಲ್ಲದೆ, ತನಿಖೆಗೆ ಆದೇಶ ನೀಡುತ್ತಾರೆ.

    ಆದಾಗ್ಯೂ ರೆಜಿತಾ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಒಳ್ಳೆಯ ಜಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ. ಸಾಕಷ್ಟು ಮನವಿ ಮತ್ತು ದೂರುಗಳನ್ನು ನೀಡಿದರೂ ಜಯಚಂದ್ರನ್​ ಕುಟುಂಬಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಕುಟುಂಬ, ರೆಜಿತಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. (ಏಜೆನ್ಸೀಸ್​)

    ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಬಡ ರಾಜ್ಯ; ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ ವರದಿ ಪ್ರಕಟ

    ಮತಾಂತರವಾದರೆ ಜಾತಿ ಬದಲಾಗದು; ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್

    ವಿಶ್ವಕ್ಕೆ ರೂಪಾಂತರಿ ಆತಂಕ: ಒಂದೇ ವೈರಸ್​ನಲ್ಲಿ 32 ರೂಪಾಂತರಿಗಳ ಗುಚ್ಛ; ತಜ್ಞರ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts