More

    ರಾಜ್ಯದ ಪಾಲಿಗೆ ಕಹಿ ಸುದ್ದಿ: KSRTC ಹೆಸರು, ಲೋಗೋ ಕಳೆದುಕೊಳ್ಳಲಿದೆ ಕರ್ನಾಟಕ!

    ಬೆಂಗಳೂರು: ಸಾರಿಗೆ ಬಸ್‌ಗಳಲ್ಲಿ ಕೆಎಸ್ಸಾರ್ಟಿಸಿ ಹೆಸರು ಮತ್ತು ಲೋಗೋ ಕೇರಳಕ್ಕೆ ಮಾತ್ರ ಸೀಮಿತವೆಂದು ಭಾರತ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಮಂಜೂರು ಮಾಡಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಸಾರ್ಟಿಸಿ ಹೆಸರನ್ನು ಬದಲಿಸಬೇಕಾದ ಸ್ಥಿತಿ ಬಂದಿದೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಆದೇಶದ ಬಗ್ಗೆ ಈವರೆಗೂ ಮಾಹಿತಿ ಇಲ್ಲ ಎಂದು ಕರ್ನಾಟಕ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೇರಳ ಸಾರಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅಧಿಕೃತಗೊಳಿಸಿದೆ.

    ಕರ್ನಾಟಕ ಮತ್ತು ಕೇರಳ ನಡುವೆ ಕಳೆದ 8 ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಇದೀಗ ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್ ಆದೇಶದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ಸುಗಳು, ಕಚೇರಿ ಸೇರಿ ಇನ್ನಿತರ ಕಡೆಗಳಲ್ಲಿ ಬಳಸಿರುವ ಕೆಎಸ್ಸಾರ್ಟಿಸಿ ಹೆಸರು ಮತ್ತು ಲೋಗೋವನ್ನು ತೆಗೆಯಬೇಕಾಗಿದೆ ಹಾಗೂ ಇನ್ನು ಮುಂದೆ ಕೆಎಸ್ಸಾರ್ಟಿಸಿ ಹೆಸರೂ ಬಳಸಲು ಅಧಿಕಾರವಿಲ್ಲದಂತಾಗಿದೆ.

    ವಿವಾದವೇನು?: ಕೆಎಸ್ಸಾರ್ಟಿಸಿ ಹೆಸರು ಬಳಕೆ ಕುರಿತಂತೆ ಕಳೆದ 8 ವರ್ಷಗಳಿಂದ ಕರ್ನಾಟಕ ಮತ್ತು ಕೇರಳ ಸಾರಿಗೆ ಇಲಾಖೆ ನಡುವೆ ವಿವಾದವಿದೆ. ಎರಡೂ ರಾಜ್ಯದ ಸಾರಿಗೆ ಇಲಾಖೆಗಳು ತಮ್ಮ ಸಾರಿಗೆ ಸೇವೆಯನ್ನು ಕೆಎಸ್ಸಾರ್ಟಿಸಿ ಹೆಸರಿನಲ್ಲಿ ನಡೆಸುತ್ತಿದ್ದವು. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿತ್ತು. ಹೀಗಾಗಿ ಕರ್ನಾಟಕ ಕೆಎಸ್ಸಾರ್ಟಿಸಿ ಹೆಸರನ್ನು ನೋಂದಣಿ ಮಾಡಿಕೊಡುವಂತೆ 2013 ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇರಳ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿದ್ದೇ 1973ರಲ್ಲಿ, ಅದಕ್ಕೂ ಮುನ್ನವೇ ಕೇರಳದಲ್ಲಿ ಸಾರಿಗೆ ಸಂಸ್ಥೆಗೆ ಕೆಎಸ್ಸಾರ್ಟಿಸಿ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಆ ಹೆಸರ ಬಳಕೆ ಅಧಿಕಾರವನ್ನು ಕೇರಳಕ್ಕೆ ನೀಡಬೇಕು ಎಂದು ವಾದಿಸಿತ್ತು. ಇದೀಗ ಕೇಂದ್ರ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಕೆಎಸ್ಸಾರ್ಟಿಸಿ ಹೆಸರು ಬಳಕೆಗೆ ಕೇರಳಕ್ಕೆ ಅನುಮತಿಸಿದೆ. ಹೀಗಾಗಿ ಕರ್ನಾಟಕ ಸಾರಿಗೆ ಇಲಾಖೆಗೆ ಭಾರಿ ಹಿನ್ನಡೆಯಾಗುವಂತಾಗಿದೆ.

    ಎಂಜಿಆರ್‌ಟಿಡಿಯಿಂದ ಕೆಎಸ್ಸಾರ್ಟಿಸಿವರೆಗೆ: ರಾಜ್ಯದಲ್ಲಿ ಮೊದಲು ಸಾರಿಗೆ ಸೇವೆ ಆರಂಭವಾಗಿದ್ದು 1948ರ ಸೆಪ್ಟೆಂಬರ್ 12ರಂದು. ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ (ಎಂಜಿಆರ್‌ಟಿಡಿ) ಮೂಲಕ 120 ಬಸ್‌ಗಳಿಂದ ಸಾರಿಗೆ ಸೇವೆ ಆರಂಭಿಸಲಾಯಿತು. ಅದಾದ ನಂತರ 1961ರ ಆಗಸ್ಟ್‌ನಲ್ಲಿ ಸಾರಿಗೆ ಸೇವೆಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲಾಯಿತು. ಅದಕ್ಕೆ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ ಎಂದು ನಾಮಕರಣ ಮಾಡಲಾಗಿತ್ತು.

    ಅಂತಿಮವಾಗಿ 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಸರಿನಲ್ಲಿ ಸೇವೆ ನೀಡಲಾಗುತ್ತಿದೆ. ಅಲ್ಲದೆ, 1997ರಲ್ಲಿ ನಾಲ್ಕು ನಿಗಮಗಳು ರಚನೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿ ನಾಲ್ಕು ನಿಗಮಗಳು ರಚನೆಯಾದವು. ಅದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಕೆಎಸ್ಸಾರ್ಟಿಸಿ ಎಂದು ಕರೆಯಲಾಗುತ್ತಿದೆ.

    ರಾಜ್ಯದಲ್ಲಿ ಕರೊನಾ ಅನ್​ಲಾಕ್​ ಪ್ರಕ್ರಿಯೆ ಶುರು: ರಪ್ತು ವಲಯಕ್ಕೆ ಅನುಮತಿ ನೀಡಿ ಸರ್ಕಾರದ ಆದೇಶ

    ಸೆಕ್ಸ್​ ಸೀನ್​ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!

    ತಾಯಿ-ಅಕ್ಕನನ್ನು ಕಳೆದುಕೊಂಡು ಮನಸು ಚೂರಾಗಿದೆ ಎಂದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts