More

    ತಲೆಹೊಟ್ಟು ಸಮಸ್ಯೆ ಕಾಡುತ್ತಿದೆಯೇ? ಈ 10 ನೈಸರ್ಗಿಕ ಮನೆಮದ್ದನ್ನು ಬಳಸಿ ಡ್ಯಾಂಡ್ರಫ್​​ನಿಂದ ದೂರವಾಗಿ

    ಜನ ಸಾಮಾನ್ಯರ ದಿನ ನಿತ್ಯದ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡ ಒಂದು. ನೋಡಲು ಸಣ್ಣ ಕಣದಂತಿರುವ ತಲೆಹೊಟ್ಟು ಸಂತೋಷದ ಸಂದರ್ಭವನ್ನೇ ಹಾಳುಮಾಡುವಷ್ಟು ಸಮಸ್ಯೆಯನ್ನು ತಂದಿಡುತ್ತದೆ. ತಲೆಯಲ್ಲಿ ತುರಿಕೆಯನ್ನು ಉಂಟು ಮಾಡುವುದಲ್ಲದೇ ಕೂದಲ ಉದುರುವಿಕೆಗೂ ಕಾರಣವಾಗಿ ವ್ಯಕ್ತಿಯ ಸೌಂದರ್ಯವನ್ನೇ ಹಾಳುಗೆಡವುತ್ತದೆ. ಹೀಗಾಗಿ ಅದರ ನಿವಾರಣೆಗೆ ಶಾಂಪೂ, ಚಿಕಿತ್ಸೆ ಅಂತಾ ಜನರು ಸಾಕಷ್ಟು ಖರ್ಚು ಮಾಡುತ್ತಾರೆ. ಆದರೆ, ಮನೆಯಲ್ಲೇ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

    ತಲೆಹೊಟ್ಟನ್ನು ಸೆಬೊರಿಯಾ ಅಂತಾ ಕರೆಯುತ್ತಾರೆ. ಯುವಕರಿಂದಿಡಿದು ವಯಸ್ಸಾದವರ ನೆತ್ತಿಯನ್ನೇ ಇದು ಟಾರ್ಗೆಟ್​ ಮಾಡುತ್ತದೆ. ಮೊಡವೆ ಸೇರಿದಂತೆ ಅನೇಕ ಚರ್ಮ ಸಮಸ್ಯೆಗಳನ್ನು ಇದು ತಂದೊಡ್ಡುತ್ತದೆ. ಕಳಪೆ ಬಾಚಣಿಗೆ, ಶಾಂಪೂ ಬಳಸುವ ಹವ್ಯಾಸ, ಒಣ ಚರ್ಮ, ಒತ್ತಡ ಮತ್ತು ಆಹಾರ ಕ್ರಮ ಸರಿಯಿಲ್ಲದಿರುವುದು ತಲೆಹೊಟ್ಟ ಸೃಷ್ಟಿಗೆ ಕಾರಣವಾಗುತ್ತದೆ. ಹಾಗಾದ್ರೆ ಈ ತಲೆಹೊಟ್ಟಿಗೆ ಮನೆ ಮದ್ದು ಏನು ಅಂತಾ ಈಗ ನೋಡೋಣ.

    1. ಕೊಬ್ಬರಿ ಎಣ್ಣೆ ಮತ್ತು ನಿಂಬೆಹಣ್ಣಿನ ಮಸಾಜ್​
    ಕೊಬ್ಬರಿ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ಅದೇ ರೀತಿ ಯಾವುದೇ ಹಾನಿಕಾರಕ ರಾಸಾಯನಿಕ ಬಳಸದೇ ತಲೆಹೊಟ್ಟು ನಿವಾರಿಸಲು ನಿಂಬೆಹಣ್ಣಿನ ರಸ ಕೂಡ ತುಂಬಾ ಉಪಕಾರಿಯಾಗಿದೆ. ಈ ಎರಡನ್ನು ಹೇಗೆ ಬಳಸೋದು ಅಂತಾ ನೋಡೋದಾದ್ರೆ. ಮೊದಲು ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಕಾಯಿಸಿ, ಅದೇ ಪ್ರಮಾಣದ ನಿಂಬೆ ಹಣ್ಣಿನ ರಸದ ಜೊತೆ ಬೆರಸಿಕೊಳ್ಳಬೇಕು. ನಂತರ ನೆತ್ತಿಗೆ ಹಾಕಿ ಮಸಾಜ್​ ಮಾಡಿ ಸುಮಾರು 20 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಬೇಕು.

    2. ಮೆಂತ್ಯ ಪ್ಯಾಕ್​
    ಮೆಂತ್ಯ ಕಾಳುಗಳು ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಮಾಡಬೇಕಿರುವುದಿಷ್ಟೇ. ಒಂದಿಷ್ಟು ಮೆಂತ್ಯ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನಸಿಡಬೇಕು. ಬಳಿಕ ಕಾಳುಗಳನ್ನು ತೆಗೆದು ಅದನ್ನು ರುಬ್ಬಿ ಪೇಸ್ಟ್​ ಮಾಡಿಕೊಳ್ಳಬೇಕು. ನಂತರ ಪೇಸ್ಟ್​ ಅನ್ನು ತೆಲೆಗೆ ಹಾಕಿ ಒಂದು ಗಂಟೆ ಒಣಗಲು ಬಿಡಬೇಕು. ಇದಾದ ಬಳಿಕ ಶಾಂಪೂ ಬಳಸಿ ತೊಳೆಯಬೇಕು.

    3. ಮೊಸರು
    ಸುಲಭವಾಗಿ ಸಿಗುವ ಮೊಸರು ಕೂಡ ತಲೆಹೊಟ್ಟಿಗೆ ರಾಮಬಾಣ. ಸ್ವಲ್ಪ ಪ್ರಮಾಣದ ಮೊಸರನ್ನು ತೆಗೆದುಕೊಂಡು ನೆತ್ತಿಯ ಮೇಲೆ ಹಾಕಬೇಕು. ಬಳಿಕ ಒಂದು ಗಂಟೆ ಹಾಗೇ ಬಿಟ್ಟು, ನಂತರ ಶಾಂಪೂ ಬಳಸಿ ತೊಳೆದುಕೊಳ್ಳಬೇಕು.

    4. ಅಡುಗೆ ಸೋಡ
    ಇದಂತೂ ತಲೆಹೊಟ್ಟಿಗೆ ತುಂಬಾ ಪರಿಣಾಮಕಾರಿ. ಮೊದಲು ಕೂದಲನ್ನು ಸ್ವಲ್ಪ ತೇವಗೊಳಿಸಿಕೊಳ್ಳಬೇಕು. ಬಳಿಕ ಒಂದು ಚಮಚ ಅಡುಗೆ ಸೋಡ ತೆಗೆದುಕೊಂಡು ನೆತ್ತಿಯ ಮೇಲೆ ಉಜ್ಜಬೇಕು. ಬಳಿಕ 60 ರಿಂದ 90 ಸೆಕೆಂಡ್​ ಹಾಗೇ ಬಿಟ್ಟು ನಂತರ ನೀರಿನಲ್ಲಿ ತೊಳೆಯಬೇಕು.

    5. ಚಹಾ ಮರದ ಎಣ್ಣೆ (ಟೀ ಟ್ರೀ ಆಯಿಲ್​)
    ಚಹಾ ಮರದ ಎಣ್ಣೆಯು ಕೂಡ ತಲೆಹೊಟ್ಟಿ ಅತ್ಯತ್ತಮವಾದ ಮನೆಮದ್ದು. ಕೆಲವು ಹನಿಯಷ್ಟು ಎಣ್ಣೆಯನ್ನು ನೆತ್ತಿಯ ಮೇಲೆ ಹಾಕಿ ಸುತ್ತ ಸಮವಾಗಿ ಹರಡಬೇಕು. ಸುಮಾರು 5 ನಿಮಿಷ ಹಾಗೇ ಬಿಟ್ಟ ನಂತರ ಶಾಂಪೂವಿನಿಂದ ತೊಳೆಯಬೇಕು.

    6. ಆ್ಯಪಲ್​ ಸೈಡರ್​ ವಿನೇಗರ್​
    ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ನಿವಾರಿಸೋ ಮನೆಮದ್ದುಗಳಲ್ಲೇ ಆ್ಯಪಲ್​ ಸೈಡರ್​ ವಿನೇಗರ್​ ತುಂಬಾ ಪರಿಣಾಮಕಾರಿಯಾದ್ದುದ್ದು. ಅದನ್ನು ಬಳಸುವುದು ಹೇಗೆಂದರೆ, ಸಮ ಪ್ರಮಾಣದಲ್ಲಿ ಆ್ಯಪಲ್​ ಸೈಡರ್​ ವಿನೇಗರ್​ ಮತ್ತು ನೀರನ್ನು ಮಿಶ್ರಣ ಮಾಡಿ ಒಂದು ಕಡೆ ಇಡಬೇಕು. ಬಳಿಕ ತಲೆಯನ್ನು ತೊಳೆದು ಮಿಶ್ರಣವನ್ನು ತೇವವಿರುವ ಕೂದಲಿಗೆ ಹಚ್ಚಿ ಮಸಾಜ್​ ಮಾಡಬೇಕು. ಬಳಿಕ 15 ನಿಮಿಷಗಳ ಕಾಲ ಬಿಟ್ಟು, ನೀರಿನಲ್ಲಿ ತೊಳೆಯಬೇಕು.

    7. ಮೆಹಂದಿ
    ಎಲ್ಲೆಡೆ ಸುಲಭವಾಗಿ ಸಿಗುವ ಮನೆಮದ್ದು ಅಂದರೆ ಮೆಹಂದಿ. ಇದು ತಲೆಹೊಟ್ಟು ನಿವಾರಣೆ ಮಾಡುವುದು ಮಾತ್ರವಲ್ಲ ಕೂದಲನ್ನು ಸಹ ಮೃದುವಾಗಿಸುತ್ತದೆ. ಅದರಲ್ಲೂ ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಬಳಸಿದ್ರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಬಳಸುವುದು ಹೇಗೆಂದರೆ, ಮೊದಲು ಮೆಹಂದಿಯನ್ನು ಮೊಸರು ಮತ್ತು ಒಂದು ಹನಿ ನಿಂಬೆರಸದೊಂದಿಗೆ ಮಿಶ್ರಣ ಮಾಡಿ ಸುಮಾರು 8 ಗಂಟೆಗಳ ಕಾಲ ಒಂದು ಕಡೆ ಇಡಿ. ಬಳಿಕ ಮಿಶ್ರಣವನ್ನು ತೆಗೆದುಕೊಂಡು ನೆತ್ತಿ ಹಾಗೂ ಕೂದಲಿಗೆ ಹಚ್ಚಿ. ಬಳಿಕ ಸುಮಾರು 2 ಗಂಟೆಗಳ ಕಾಲ ಹಾಗೇ ಬಿಟ್ಟು ಕೊನೆಗೆ ನೀರಿನಲ್ಲಿ ತೊಳೆಯಿರಿ.

    8. ಬೇವಿನ ರಸ
    ಬೇವಿನಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸತ್ವ ಹೆಚ್ಚಾಗಿದೆ. ಇದೊಂದು ಅದ್ಭುತ ಮನೆಮದ್ದು. ಹೆಚ್ಚು ಹಣ ವ್ಯಯಿಸದೇ ಸುಲಭವಾಗಿ, ಹೆಚ್ಚಾಗಿ ಸಿಗುವಂತಹ ಮನೆಮದ್ದು ಇದಾಗಿದ್ದು, ಬಳಸುವುದು ಹೇಗೆ ಎಂದು ನೋಡುವುದಾದರೆ, ಒಂದು ಗೊಂಚಲು ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ತೊಳೆದು, ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಂಡು, ಪೇಸ್ಟ್​ ರೀತಿ ಮಾಡಿಕೊಳ್ಳಬೇಕು. ಬಳಿಕ ಪೇಸ್ಟ್​ ಅನ್ನು ನೆತ್ತಿಗೆ ಹಚ್ಚಿ, ಸುಮಾರು 10 ನಿಮಿಷಗಳ ಕಾಲ ಹಾಗೇ ಬಿಡಬೇಕು. ನಂತರ ನೀರಿನಲ್ಲಿ ತೊಳೆಯಬೇಕು.

    9. ಮುಲ್ತಾನಿ ಮಿಟ್ಟಿ ಹೇರ್​ ಪ್ಯಾಕ್​
    ಮನೆಮದ್ದುಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಮುಲ್ತಾನಿ ಮಿಟ್ಟಿ ಕೂಡ ಒಂದು. ಇದು ಕೂದಲ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಬಳಸುವುದರಿಂದ ಮೃದುವಾದ ಮತ್ತು ರೇಷ್ಮೆಯಂತಹ ತಲೆಹೊಟ್ಟು ಮುಕ್ತ ಕೂದಲಲು ನಿಮ್ಮದಾಗುತ್ತದೆ. ಇದನ್ನು ಬಳಸುವುದು ಹೇಗೆಂದರೆ, ಮುಲ್ತಾನಿ ಮಿಟ್ಟಿಗೆ ಸ್ವಲ್ಪ ನೀರು ಮತ್ತು ನಿಂಬೆರಸ ಹಾಕಿಕೊಂಡು ಗಟ್ಟಿಯಾದ ಪೇಸ್ಟ್​ ಮಾಡಿಕೊಳ್ಳಬೇಕು. ಪೇಸ್ಟ್​ ಅನ್ನು ನೆತ್ತಿಯ ಮೇಲೆ ಹಾಕಿ, ಸುಮಾರು 20 ನಿಮಿಷಗಳ ಕಾಲ ಹಾಗೇ ಬಿಡಬೇಕು. ಬಳಿಕ ನೀರಿನಲ್ಲಿ ತೊಳೆದರೆ, ತಲೆಹೊಟ್ಟು ಮಾಯಾವಾಗುತ್ತದೆ.

    10. ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ಯಾಕ್​
    ಬಹುತೇಕರು ಕಿತ್ತಳೆಹಣ್ಣು ತಿಂದು ಸಿಪ್ಪೆ ಬೀಸಾಡುತ್ತಾರೆ. ಆದರೆ, ಆ ಸಿಪ್ಪೆಯ ಉಪಯೋಗ ತಿಳಿದ್ರೆ ಇನ್ಮುಂದೆ ಅದನ್ನು ಎಸೆಯಲು ಯೋಚಿಸುವುದು ಗ್ಯಾರೆಂಟಿ. ಕೂದಲು ಮಾತ್ರವಲ್ಲದೆ ಮುಖದ ಕಾಂತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇದನ್ನು ಬಳಸುವುದು ಹೇಗೆಂದರೆ, ಕಿತ್ತಳೆ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ, ಚೆನ್ನಾಗಿ ರುಬ್ಬಿ ಪೇಸ್ಟ್​ ಮಾಡಿಕೊಳ್ಳಿ. ಬಳಿಕ ಪೇಸ್ಟ್​ ಅನ್ನು ನೆತ್ತಿಯ ಮೇಲೆ ಹಾಕಿ, ಸುಮಾರು 30 ನಿಮಿಷ ಹಾಗೇ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

    ಕೊನೆಯಲ್ಲಿ ಇದು ನಿಮ್ಮ ಗಮನದಲ್ಲಿರಲಿ, ಒಳ್ಳೆಯ ಫಲಿತಾಂಶಕ್ಕಾಗಿ ಈ ಮೇಲಿನ ಮನೆಮದ್ದುಗಳನ್ನು ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ಹಾಕಬೇಕು. ಮನೆಮದ್ದನ್ನು ನಿರಂತರವಾಗಿ ಅನುಸರಿಸಿದರೆ, ಆದಷ್ಟು ಬೇಗವೇ ವ್ಯತ್ಯಾಸ ನಿಮಗೆ ತಿಳಿಯಲಿದೆ. ರಾಸಾಯನಿಕ ಮಿಶ್ರಿತ ವಸ್ತಗಳನ್ನು ಬಳಸುವುದಕ್ಕಿಂತ ಅಥವಾ ಆಸ್ಪತ್ರೆಗಳಿಗೆ ದುಡ್ಡು ಸುರಿಯುವುದಕ್ಕಿಂತ ಮನೆಯಲ್ಲೇ ಸುಲಭವಾಗಿ ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಒಮ್ಮೆ ಪ್ರಯತ್ನಿಸಿ ನೋಡಿ.

    ಇಂಟರ್​ನೆಟ್​ರಹಿತ ಯುಪಿಐ ಪಾವತಿ; ಶೀಘ್ರದಲ್ಲೇ ಜಾರಿಗೊಳಿಸುವ ಸೂಚನೆ ನೀಡಿದ ಆರ್​ಬಿಐ

    ಗೂಗಲ್​ ಸರ್ಚ್​​ನಲ್ಲಿ ಈ ವರ್ಷ ಮಿಂಚಿದ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ TOP 10

    ನಟಿ ದೀಪ್ತಿಯನ್ನು ಮದ್ವೆ ಆಗೋದಾದ್ರೆ ಈ ಷರತ್ತುಗಳಿಗೆ ಒಪ್ಪಲೇಬೇಕು ತೆಲುಗಿನ ಖ್ಯಾತ ಯೂಟ್ಯೂಬರ್​ ಶನ್ನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts