More

    ಅಜಾತಶತ್ರು ವಾಜಪೇಯಿ ಜನ್ಮ ವಾರ್ಷಿಕೋತ್ಸವ: ಸದೈವ್​ ಅಟಲ್​ ಸ್ಮಾರಕಕ್ಕೆ ಗಣ್ಯರಿಂದ ಪುಷ್ಪ ನಮನ

    ನವದೆಹಲಿ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ 97ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಪ್ರಮುಖ ಗಣ್ಯರು ವಾಜಪೇಯಿ ಅವರಿಗೆ ಶನಿವಾರ (ಡಿ.25) ಗೌರವ ನಮನ ಸಲ್ಲಿಸಿದರು.

    ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದ ಬಳಿ ನಿರ್ಮಾಣ ಮಾಡಲಾಗಿರುವ ಸದೈವ್​ ಅಟಲ್​ ಸ್ಮಾರಕಕ್ಕೆ ತೆರಳಿದ ಗಣ್ಯರು ವಾಜಪೇಯಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ಪಿಯೂಷ್​ ಗೋಯೆಲ್ ಹಾಗೂ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಉಪಸ್ಥಿತರಿದ್ದರು.

    ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇಂದು ಅಟಲ್ ಜೀ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ದೇಶಕ್ಕಾಗಿ ಅವರು ನೀಡಿದ ಶ್ರೀಮಂತ ಸೇವೆಯಿಂದ ನಾವಿಂದು ಸ್ಫೂರ್ತಿ ಪಡೆದಿದ್ದೇವೆ. ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸಲು ವಾಜಪೇಯಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಅಭಿವೃದ್ಧಿಯ ಕ್ರಮಗಳು ಲಕ್ಷಾಂತರ ಭಾರತೀಯರ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಿವೆ ಎಂದು ವಾಜಪೇಯಿ ಅವರನ್ನು ಸ್ಮರಿಸಿದ್ದಾರೆ.

    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರು 2018 ಆಗಸ್ಟ್​ 16ರಂದು ದೆಹಲಿಯಲ್ಲಿ ಕೊನೆಯುಸಿರೆಳೆದರು. ಸಕಲ ಗೌರವಗಳೊಂದಿಗೆ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಲ್ಲದೆ, ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮವನ್ನು ಬಿಡಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts