ಕನಸಲ್ಲಿ ಬಂದು ಆಗ್ರಹ: ಜಮೀನಿನಲ್ಲಿದ್ದ ಚೆನ್ನಕೇಶವನಿಗೆ ಪೂಜೆ ಸಲ್ಲಿಸಿದ ಹಾಸನದ ಮುಸ್ಲಿಂ ಕುಟುಂಬ!

2 Min Read

ಹಾಸನ: ರಾಜ್ಯದಲ್ಲಿ ಒಂದೆಡೆ ಎರಡು ಕೋಮುಗಳ ನಡುವೆ ದಳ್ಳುರಿ ಹೊತ್ತಿ ಉರಿಯುತ್ತಿದ್ದರೆ, ಹಾಸನದಲ್ಲಿ ಹುಬ್ಬೇರಿಸುವ ಘಟನೆ ಒಂದು ನಡೆದಿದೆ. ಕನಸಿನಲ್ಲಿ ದೇವರು ಬಂದು ಸೂಚಿಸಿದ ಎಂಬ ಕಾರಣಕ್ಕೆ ಮುಸ್ಲಿಂ ಕುಟುಂಬವೊಂದು ತಮ್ಮ ಜಮೀನಿನಲ್ಲಿ ಚೆನ್ನಕೇಶವನಿಗೆ ಪೂಜೆ ನೆರವೇರಿಸಿರುವ ಘಟನೆ ನಡೆದಿದೆ.

10 ವರ್ಷಗಳ ಹಿಂದೆ ಮುಸ್ಲಿಂ ಕುಟುಂಬ ಜಮೀನು ಮಾರಾಟ ಮಾಡಿತ್ತು. ಆದರೆ, ಜಮೀನಿನಲ್ಲಿ ಇರುವ ಚೆನ್ನಕೇಶವ ದೇವರು ಕನಸಿನಲ್ಲಿ ಬಂದು ಪೂಜಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲೆ ಮುಸ್ಲಿಂ ಕುಟುಂಬ ಜಮೀನಿನ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಈ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.

ವಿವರಣೆಗೆ ಬರುವುದಾದರೆ, ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯ ದೀನ್ ದಯಾಳ್ ಬಾಡಾವಣೆಯಲ್ಲಿ ವಾಸವಿರುವ ಭಾಷಾಸಾಹೇಬ್ ಕುಟುಂಬ ದೇವರ ಕಾರ್ಯ ನೆರವೇರಿಸಿದೆ. ಭಾಷಾಸಾಹೇಬ್ ಕುಟುಂಬ ದಿವಂಗತ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಉಳುವನೆ ಒಡೆಯ ನಿಯಮದಡಿ ಬೇಲೂರಿನಲ್ಲಿ ಭೂಮಿ ಪಡೆದು ತಮ್ಮ ಹೆಸರಿನಲ್ಲಿ ದಾಖಲೆ ಪಡೆದಿದ್ದರಂತೆ. ಇದೇ ಜಾಗದಲ್ಲಿ ಜಂಟಿಯಾಗಿ ಬೆಳೆದಿದ್ದ ನೆರಳೆ ಮತ್ತು ಆಲದ ಮರದ ಬಳಿ ಚೆನ್ನಕೇಶವ ದೇವಾಲಯಕ್ಕೆ ಸಂಬಂಧಿಸಿದ ಕಲ್ಲಿಗೆ ಭಾಷಾಸಾಹೇಬ್ ತಮ್ಮ ಬೆಳೆ ಕಟಾವಿನ ಸಮಯದಲ್ಲಿ ಪ್ರತಿವರ್ಷ ಪೂಜೆ ಸಲ್ಲಿಸುತ್ತಿದ್ದರಂತೆ.

ಆದರೆ, ಕಳೆದ ಎಂಟು ವರ್ಷದ ಹಿಂದೆ ಮಲ್ಲಿಕಾರ್ಜುನ ಗ್ರೂಪ್ ನಾಗಣ್ಣ ಎಂಬುವರಿಗೆ ಭಾಷಾಸಾಹೇಬ್ ತಮ್ಮ ಜಮೀನನ್ನು ಮಾರಿದ್ದರು. ಆದರೆ, ದೇವರಿರುವ ಜಾಗವನ್ನು ಮಾತ್ರ ಹಾಗೇ ಉಳಿಸಿಕೊಂಡಿದ್ದರು. ನಂತರ ಪೂಜೆ ಮಾಡುತ್ತಿರಲಿಲ್ಲ. ಹೀಗಾಗಿ ಭಾಷಾಸಾಹೇಬ್ ಮಗ ರಿಯಾಜ್​ ಪಾಷಾ ಕನಸಿನಲ್ಲಿ ಕಾಣಿಸಿಕೊಂಡ ಚೆನ್ನಕೇಶವ ದೇವರು ನನಗೇಕೆ ಪೂಜಿಸುತ್ತಿಲ್ಲ ಎಂದು ಕೇಳಲು ಆರಂಭಿಸಿದರಂತೆ. ಇದರಿಂದ ಎಚ್ಚೆತ್ತ ಕುಟುಂಬ ಇದೀಗ ಬೇಲೂರಿಗೆ ಆಗಮಿಸಿ ತಮ್ಮ ಜಮೀನು ಬಳಿ ಇರುವ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಸದ್ಯಕ್ಕೆ ಅರ್ಚಕರ ಬಳಿ ಪೂಜೆ ಮಾಡಿಸಿದ್ದು, ಮುಂದೆ ಅವರೇ ಪೂಜಾ ಕೈಂಕರ್ಯ ಮಾಡಿಕೊಂಡು ಹೋಗುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಮುಖ್ಯವಾಗಿ ವೃಕ್ಷರಾಜನಿಗೆ ಪೂಜೆ ನೆರವೇರಿಸಲಾಗಿದೆ. ಈ ಜಾಗ ಹಿಂದೆ ಭಾಷಾಸಾಹೇಬ್ ಕುಟುಂಬದ ಬಳಿ ಇತ್ತು. ಆ ಕುಟುಂಬ ಕೂಡ ಇದಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಈ ದೇಶದಲ್ಲಿದ್ದವರೆಲ್ಲ ಒಂದೆ. ಎಲ್ಲರಿಗೂ ದೇವರು ಒಬ್ಬನೆ. ಹೀಗಾಗಿ ಇಲ್ಲಿ ಭೇದ ಭಾವ ಇರದೆ ಒಟ್ಟಾಗಿ ಪೂಜೆ ನೆರವೇರಿಸಿದ್ದೇವೆ ಎಂದು ಅರ್ಚಕ ವೇದ ಬ್ರಹ್ಮ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ವೃಕ್ಷ ರಾಜನ ಪೂಜೆ ನಂತರ ಭಾಷಾಸಾಹೇಬ್ ಕುಟುಂಬದ ಸದಸ್ಯರಿಗೆಲ್ಲ ಸ್ಥಳೀಯರು ಶಾಲು ಹೊದಿಸಿ ಸನ್ಮಾನಿಸಿ ಕಳಿಸಿಕೊಟ್ಟಿದ್ದಾರೆ. ಭಾಷಾಸಾಹೇಬ್​ ಕುಟುಂಬವು ಸಹ ಸಹಬಾಳ್ವೆಯಿಂದ ಪೂಜೆಯಲ್ಲಿ ಭಾಗಿಯಾಗಿ ತೆರಳಿದ್ದು, ಈ ಘಟನೆ ಮಾದರಿ ಆಗಿದೆ. ಭಾರತದಲ್ಲಿ ಹುಟ್ಟಿದ ಎಲ್ಲರೂ ಒಂದೇ ಎಂಬುದನ್ನ ಭಾಷಾಸಾಹೇಬ್ ಕುಟುಂಬ ಸಾರಿ ಹೇಳಿದೆ. (ಕುಶ್ವಂತ್ ದಿಗ್ವಿಜಯ ನ್ಯೂಸ್​ ಹಾಸನ)

2019ರ ಬಳಿಕ ಮತ್ತೊಮ್ಮೆ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಚುನಾವಣಾಧಿಕಾರಿ ರೀನಾ ದ್ವಿವೇದಿ!

ಭಾವಿ ವೈದ್ಯರ ನಕಲಿನ ರೀತಿ ನೋಡಿ ಪರೀಕ್ಷಕರೇ ಸುಸ್ತು! ಕಣ್ಣಿಗೆ ಕಾಣದ ಸಾಧನದಿಂದ ಕಾಪಿ…

ಬೆಳಗ್ಗೆ ಸಹೋದ್ಯೋಗಿಗೆ ಕರೆ ಮಾಡಿದ ಬೆನ್ನಲ್ಲೇ ಸಾವಿನ ಹಾದಿ ಹಿಡಿದ ಮಹಿಳಾ ಟೆಕ್ಕಿ..!

Share This Article