More

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ಭಯಾನಕವಾಗಿದೆ ಆರೋಪಿಗಳ ಹಿನ್ನೆಲೆ, ದುಷ್ಕೃತ್ಯವೇ ಇವರ ಫುಲ್​ ಟೈಂ ಕೆಲ್ಸ!

    ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನೊರ್ವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಈಗಾಗಲೇ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.

    ಬಂಧಿತರೆಲ್ಲರೂ ತಮಿಳುನಾಡಿನ ತಿರುಪ್ಪೂರ್ ಹಾಗೂ ಸೂಸೈಪುರಂ ಗ್ರಾಮದವರಾಗಿದ್ದು, ಆರೋಪಿಗಳನ್ನು ಭೂಪತಿ, ಜೋಸೆಫ್​, ಮುರುಗೇಶನ್​ ಮತ್ತು ಪ್ರಕಾಶ್​ ಎಂದು ಗುರುತಿಸಲಾಗಿದೆ. ಓರ್ವ ಆರೋಪಿ ಅಪ್ರಾಪ್ತ ಎಂದು ಹೇಳಲಾಗಿದೆ. ಆರೋಪಿಗಳ ಹಿನ್ನೆಲೆಯನ್ನು ನೋಡಿದಾಗ ಭಯ ಹುಟ್ಟಿಸುವಂತಿದೆ. ಇವರೆಲ್ಲರೂ ಸಮಾಜಕ್ಕೆ ಕಂಟಕಗಳಾಗಿದ್ದರು. ರೋಡ್​ ರಾಬರಿ ಮಾಡುವುದೇ ಇವರ ಕಸಬಾಗಿತ್ತು. ಈ ಹಿಂದೆಯು ಮೈಸೂರಿನಲ್ಲಿ ಆರೋಪಿಗಳು ಹಲವು ಕಳ್ಳತನ ನಡೆಸಿದ್ದು, ಒಂದಿಬ್ಬರು ಆರೋಪಿಗಳು ಸಿಕ್ಕಿಬಿದ್ದು ಜಾಮೀನು ಸಹ ಪಡೆದುಕೊಂಡಿದ್ದಾರೆ.

    ಮೈಸೂರಿನ ಸರ್ಕಾರಿ ಕಚೇರಿ ಟಾರ್ಗೆಟ್​ ಮಾಡಿ ಗಂಧದ ಮರ ಕದಿಯುತ್ತಿದ್ದರು. 8 ತಿಂಗಳ ಹಿಂದೆ ಗಂಧ ಮರ ಕದ್ದು ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಮೈಸೂರು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕಳ್ಳತನ ಪ್ರಕರಣದಲ್ಲಿ‌ ಆರೋಪಿಗಳು ಜಾಮೀನು ಪಡೆದುಕೊಂಡಿದ್ದರು.

    ಪ್ರಕರಣದಲ್ಲಿ ಮೊದಲು ಸೆರೆಸಿಕ್ಕ ಆರೋಪಿ ಭೂಪತಿ ಆರು ತಿಂಗಳ ಹಿಂದೆಯಷ್ಟೆ ಪೊಲೀಸರ ಅತಿಥಿಯಾಗಿದ್ದ. ಮೈಸೂರಿನ ನಜರ್ ಬಾದ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಅದಾಗಲೆ ಆತನ 10 ಪ್ರಕರಣಕ್ಕೆ ಬೇಕಾಗಿದ್ದ. ಸುಮಾರು 5 ಲಕ್ಷ ಮೌಲ್ಯದ ಶ್ರೀಗಂಧ ಹಾಗೂ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಶ್ರೀಗಂಧದ ಮರ ಕದ್ದ ಪ್ರಕರಣದಲ್ಲಿ ಜೈಲಿಗು ಹೋಗಿ ಬಂದಿದ್ದ. ಆತನೊಂದಿಗೆ ಜನವರಿ 9 ರಂದು ಉಳಿದ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಇವರು ಮೈಸೂರನ್ನು ಹೇಗೆ ಕಳ್ಳತನಕ್ಕೆ ಟಾರ್ಗೆಟ್ ಮಾಡಿಕೊಂಡಿದ್ರು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

    ಅದೇ ಭೂಪತಿ ಇದೀಗ ಗ್ಯಾಂಗ್​ರೇಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಜೈಲಿಗೆ ಹೋಗಿ ಬಂದರು ಇವರು ಬುದ್ಧಿ ಕಲಿತಿರಲಿಲ್ಲ. ಪೊಲೀಸರ ವಿಚಾರಣೆ ವೇಳೆ‌ ಒಂದೊಂದೇ ಸತ್ಯ ಹೊರ ಬರುತ್ತಿದೆ. ಮೈಸೂರಿನ ಬಗ್ಗೆ ಚೆನ್ನಾಗಿ ತಿಳಿದಿದ್ದ ಆರೋಪಿಗಳು ಯಾರು ಸುಳಿಯದ ನಿರ್ಜನ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಗೆ ಯಾರಾದರೂ ಬಂದರೆ, ಅವರನ್ನು ಟಾರ್ಗೆಟ್​ ಮಾಡಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಹೀಗಾಗಿ ಸಾಕಷ್ಟು ದುಷ್ಕೃತ್ಯಗಳನ್ನು ಆರೋಪಿಗಳು ಎಸಗಿದ್ದಾರೆ. ಆದರೆ, ಅವರ ಕರ್ಮಕ್ಕೆ ತಕ್ಕ ಫಲ ಕೊನೆಗೂ ಸಿಕ್ಕಿದೆ. ಯುವತಿಯ ಮೇಲೆರಗಿದ ಪಾಪಕ್ಕೆ ಇಡೀ ಪ್ರಕರಣಗಳು ಒಟ್ಟಿಗೆ ಬೆಳಕಿಗೆ ಬಂದು ಕಾನೂನಿನ ಕುಣಿಕೆಯಲ್ಲಿ ಸರಿಯಾಗಿ ಸಿಕ್ಕಿಕೊಂಡಿದ್ದಾರೆ.

    ಇಂತಹ ಸಮಾಜಘಾತುಕ ಶಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಿಸದೇ ಹೋದರೆ ಇಂಥವರು ಸಮಾಜದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ನೀಚ ಕೃತ್ಯ ಎಸಗುವ ಇಂಥ ನೀಚ ಮಂದಿಗೆ ನೀಡುವ ಶಿಕ್ಷೆ ಮುಂದೆ ಇಂತಹ ಕೃತ್ಯಗಳಿಗೆ ಕೈಹಾಕುವವರಿಗೆ ಎಚ್ಚರಿಕೆಯ ಪಾಠವಾಗಿರಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts